ತುಮಕೂರು, ಫೆ.26- ಎಐಟಿಯುಸಿ ರಾಷ್ಟ್ರೀಯ ಸಮಿತಿಯ ಕರೆಯ ಮೇರೆಗೆ ರಾಷ್ಟ್ರಾದ್ಯಂತ ಇಂದು ಬೇಡಿಕೆ ದಿನದ ಅಂಗವಾಗಿ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿ (ಎಐಟಿಯುಸಿ) ಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಕಳೆದ 20 ವರ್ಷಗಳಿಂದ ಕೇಂದ್ರ ಕಾರ್ಮಿಕ ಸಂಘಟನೆಗಳ ಸಮಿತಿ ರಚಿಸಿಕೊಂಡು ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಕನಿಷ್ಠ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತಾ ಬರುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಕಡೆಗಣಿಸುತ್ತಾ ಬಂದಿವೆ ಎಂದು ಆರೋಪಿಸಿದರು.
ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ ಕಾರ್ಮಿಕರ ಕನಿಷ್ಠ ಬೇಡಿಕೆಗಳಾದ ಮಾಸಿಕ 18 ಸಾವಿರ ರೂ, ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ 3000 ರೂ. ಮಾಸಿಕ ಪಿಂಚಣಿ, ನಿಗಧಿತ ಕಾಲಾವಧಿ ಕೆಲಸ ನಿಗಧಿ ಮಾಡಬೇಕು, ಕಾರ್ಪೊರೇಟ್ ಪರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ, ಕೂಡಲೇ ಇದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ ಕಾರ್ಮಿಕರ ಹಿತರಕ್ಷಣೆಗಾಗಿ ಕಾರ್ಮಿಕ ಸಂಘ ಸ್ಥಾಪಿಸಿ ಅವರ ರಕ್ಷಣೆಗೆ ಮುಂದಾಗುವ ಕ್ರಮಕ್ಕೆ ಕಂಪನಿಗಳ ಮಾಲೀಕರು ಸಂಘ ಸ್ಥಾಪನೆಗೆ ಅಡ್ಡಿ ಮಾಡುತ್ತಿರುವುದನ್ನು ಕೈಬಿಟ್ಟು ಸಂಘ ಸ್ಥಾಪನೆಗೆ ಮಾನ್ಯತೆ ನೀಡಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಪರವಾಗಿ ತಹಶೀಲ್ದಾರ್ ಮುರಳೀಧರ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ ಮೊಬೈಲ್ಸ್ ನರಸಿಂಹಮೂರ್ತಿ, ಕಾಂತರಾಜು,ಇಂಡೋಸಿಸ್ ರವಿಶಂಕರ್, ಚಾಮುಂಡಿ ಡೈಕ್ಯಾಸ್ಟ್ ವೇಣುಗೋಪಾಲ್, ಚಂದ್ರಶೇಖರ್, ನಾಗಣ್ಣ, ದೊಡ್ಡ ತಿಮ್ಮಯ್ಯ ಸೇರಿದಂತೆ ಹಲವು ಕಾರ್ಮಿಕರು ಭಾಗವಹಿಸಿದ್ದರು.