ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ಸುಮಲತಾ ಅಂಬರೀಶ್

ಬೆಂಗಳೂರು, ಫೆ.24-ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದ್ದು, ಇಬ್ಬರು ಪ್ರಮುಖ ನಾಯಕರ ಕುಟುಂಬದ ಸದಸ್ಯರು ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ.

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್‍ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅವರು ರಾಜಕೀಯ ಪ್ರವೇಶದ ಮಾತುಗಳನ್ನಾಡಿದ್ದು, ಅಧಿಕೃತವಾಗಿ ಘೋಷಣೆ ಮಾಡಿದಂತಾಗಿದೆ.

ಅಂಬರೀಶ್ ಅವರ 3ನೇ ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಸುಮಲತಾ ಅವರು, ತಾವು ಮಂಡ್ಯದ ಜನಸೇವೆ ಮಾಡಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ರಾಜಕೀಯ ಪ್ರವೇಶದ ಕುರಿತು ಹಸಿರು ನಿಶಾನೆ ತೋರಿದಂತಾಗಿದೆ.

ಅಂಬರೀಶ್ ಅವರ ನಿಧನ ಬಳಿಕ ಮಂಡ್ಯದ ಕಾರ್ಯಕರ್ತರು, ಅಂಬಿ ಅಭಿಮಾನಿಗಳು ಸುಮಲತಾ ಅವರನ್ನು ಭೇಟಿ ಮಾಡಿ ರಾಜಕೀಯ ಪ್ರವೇಶಿಸುವಂತೆ ಒತ್ತಡ ಹೇರಿದ್ದರು. ಅಲ್ಲಿಂದ ಮಂಡ್ಯ ಜಿಲ್ಲೆ ಜೊತೆ ನಿಕಟ ಸಂಪರ್ಕ ಹೊಂದಿದ ಸುಮಲತಾ ಅವರು ಜನರ ಕಷ್ಟಸುಖಗಳಿಗೆ ಸ್ಪಂದಿಸಲಾರಂಭಿಸಿದರು. ಆದರೆ ಯಾವ ಸಂದರ್ಭದಲ್ಲೂ ತಾವು ರಾಜಕೀಯ ಪ್ರವೇಶಿಸುವ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ.

 

ಇಂದು ಜನಸೇವೆ ಮಾಡಲು ಒಪ್ಪಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಸುಮಲತಾ ಅವರು ಕಾಂಗ್ರೆಸ್ ಟಿಕೆಟ್‍ನ ಆಕಾಂಕ್ಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಈಗಾಗಲೇ ಬಿಜೆಪಿಯವರು ಸುಮಲತಾ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಸುಮಲತಾ ಅವರಿಗಾಗಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲಿದೆಯೇ ಅಥವಾ ತಮ್ಮ ಪಕ್ಷದಿಂದಲೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆಯೇ ಎಂಬ ಕುತೂಹಲಗಳು ಹೆಚ್ಚಾಗಿದೆ.

ಈ ಹಿಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಕೈಬಿಟ್ಟಿದ್ದಕ್ಕಾಗಿ ಮುನಿಸಿಕೊಂಡಿದ್ದ ಅಂಬರೀಶ್, 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಹಿಂದೆ ಸರಿದಿದ್ದರು. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಕಾಂಗ್ರೆಸ್ ನಾಯಕರು ಬಿ ಫಾರಂ ಹಿಡಿದುಕೊಂಡು ಅಂಬರೀಶ್ ಮನೆ ಬಾಗಿಲಿಗೆ ಎಡತಾಕಿದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿರಲಿಲ್ಲ.

ಅದನ್ನು ವಿರೋಧ ಪಕ್ಷಗಳು ಕಾಂಗ್ರೆಸ್‍ನಿಂದ ಅಂಬರೀಶ್ ಅವರಿಗೆ ಅಪಮಾನವಾಯಿತು ಎಂದು ಬಿಂಬಿಸಿ ರಾಜಕೀಯ ವಾಗ್ದಾಳಿ ನಡೆಸಿದರು. ಸುಮಲತಾ ಅಂಬರೀಶ್ ಅವರು ಇಷ್ಟು ದಿನ ಬಹಿರಂಗವಾಗಿ ರಾಜಕೀಯ ರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಮನಸ್ಸು ಮಾಡಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ಉಳಿಸಿಕೊಂಡು ಕಾಂಗ್ರೆಸ್ ಸುಮಲತಾ ಅವರಿಗೆ ಯಾವ ರೀತಿಯ ಸ್ಥಳಾವಕಾಶ ಕಲ್ಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೊಂದೆಡೆ ಅದಮ್ಯ ಚೇತನ ಸಂಸ್ಥೆ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ತೇಜಸ್ವಿನಿ ಅನಂತ್‍ಕುಮಾರ್ ಅವರು ಇಂದು ಪ್ರಧಾನಮಂತ್ರಿಯವರ ಮನ್ ಕೀ ಬಾತ್‍ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಸಂಸದರಾಗಿದ್ದ ಅನಂತ್‍ಕುಮಾರ್ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಆದರೆ ಅನಾರೋಗ್ಯದಿಂದ ಅಕಾಲಿಕ ನಿಧನಕ್ಕೀಡಾದರು. ಅನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ ತೇಜಸ್ವಿನಿ ಅನಂತ್‍ಕುಮಾರ್ ಸರ್ವಾನುಮತದ ಆಯ್ಕೆಯಾಗಿದ್ದರು.

ಕ್ಷೇತ್ರದಲ್ಲಿ ಅವರು ರಾಜಕೀಯೇತರ ಚಟುವಟಿಕೆ ಮೂಲಕ ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದರೂ ರಾಜಕೀಯ ಪ್ರವೇಶದ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಇಂದು ಮನ್ ಕೀ ಬಾತ್ ನೇರ ಪ್ರಸಾರ ಕಾರ್ಯಕ್ರಮದ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ