ಮಂಡ್ಯದಿಂದ ಸುಮಲತಾ ಸ್ಪರ್ಧೆ ಬಹುತೇಕ ಖಚಿತ

ಮಂಡ್ಯ, ಫೆ.25- ಮುಂಬರುವ ಲೋಕಸಭೆ ಚುನಾವಣೆಗೆ ಅಂಬರೀಷ್ ಅವರ ಪತ್ನಿ ಸುಮಲತಾ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಕಣಕ್ಕಿಳಿಸುವ ಸಂಬಂಧ ಅವರ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಮಲತಾ ಅವರು, ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದಾರೆ. ಒಳ್ಳೆಯಮನೆ ನೋಡುವಂತೆ ತಮ್ಮ ಆಪ್ತರಿಗೆ ತಿಳಿಸಿದ್ದಾರೆ. ಬಾಡಿಗೆ ಮನೆ ಮಾಡುವುದು ಬೇಡ, ಸ್ವಂತ ಮನೆಯನ್ನೇ ಮಾಡಿ ಎಂದು ಅವರ ಆಪ್ತರು ಸಲಹೆ ನೀಡಿರುವ ಹಿನ್ನಲೆಯಲ್ಲಿ ಸುಮಲತಾ ಅವರು, ಸ್ವಂತ ಮನೆಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಸಂಸದೆ ರಮ್ಯಾ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಚುನಾವಣೆಯ ನಂತರ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಹಾಗಾಗಿ ಅವರಂತೆ ನೀವು ಕೂಡ ಚುನಾವಣೆ ಮುಗಿದ ಮೇಲೆ ಹೊರಟು ಹೋಗುತ್ತಿರಾ ಎಂದು ಅಪಪ್ರಚಾರ ಮಾಡುತ್ತಾರೆ. ಹೀಗಾಗಿ ಸ್ವಂತ ಮನೆಯನ್ನೇ ಮಾಡುವುದು ಸೂಕ್ತ. ಚುನಾವಣೆ ಇರಲಿ-ಬಿಡಲಿ ಮಂಡ್ಯದಲ್ಲಿಯೇ ಇದ್ದು ಜನರ ಕಷ್ಟ ಸುಖಕ್ಕೆ ಸ್ಪಂದಿಸಲು ಮುಂದಾಗಿ ಅಂಬರೀಷ್ ಅವರ ಸೇವೆಯನ್ನು ಮುಂದುವರೆಸಿ ಎಂದು ಅಂಬಿ ಅಭಿಮಾನಿಗಳು ಮತ್ತು ಬೆಂಬಲಿಗರು ಸುಮಲತಾ ಅವರಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇರುವುದರಿಂದ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬುದು ದೋಸ್ತಿ ಪಕ್ಷಗಳ ಆಶಯವಾಗಿದೆ. ಮಂಡ್ಯದ 7ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಜಿಲ್ಲೆಯಲ್ಲಿ 3ಸಚಿವರಿದ್ದಾರೆ ಹೀಗಾಗಿ ಲೋಕಸಭಾ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟು ಕೊಡಬೇಕೆಂದು ಜೆಡಿಎಸ್ ಪಕ್ಷ ಕೇಳಿದೆ.

ಸುಮಲತಾ ಅಂಬರೀಷ್ ಅವರು ಕಾಂಗ್ರೆಸ್‍ನಿಂದ ಟಿಕೆಟ್ ಕೇಳಿದ್ದು ಪಕ್ಷ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಜೆಡಿಎಸ್ ಪಕ್ಷ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಬಿಜೆಪಿಯ ಶಕ್ತಿ ಇಲ್ಲಿ ಕೊಂಚ ಹೆಚ್ಚಾಗಿದೆ. ಒಟ್ಟಾರೆ ಮಂಡ್ಯ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ದೋಸ್ತಿ ಸರಕಾರ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಹಾಕುತ್ತದೆಯೇ…? ಸುಮಲತಾ ಅವರು ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಬಿಜೆಪಿಯ ನಿಲುವೇನು ಎಂಬ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ