ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಇದಾಗಿದೆ. ಸ್ಮಾರಕ ಲೋಕಾರ್ಪಣೆ ಮಾಡಿ ಮಾತನಾಡಿದ ಪ್ರಧಾನಿ, ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಯೋಧರನ್ನು ಕಡೆಗಣಿಸಿತ್ತು. ಆದರೆ ಆರು ದಶಕಗಳ ನಂತರ ಹುತಾತ್ಮ ಯೋಧರನ್ನು ಸ್ಮರಿಸುತ್ತಿದ್ದೇವೆ. ಪ್ರತಿಯೊಬ್ಬ ಯೋಧರ ಹೆಸರುಗಳನ್ನು ಈ ಯುದ್ಧ ಸ್ಮಾರಕದಲ್ಲಿ ಕೆತ್ತಿಸಲಾಗಿದೆ ಎಂದರು.
ನಮ್ಮ ಸರ್ಕಾರ ಯೋಧರಿಗೆ ಮೊದಲ ಆದ್ಯತೆ ನೀಡಿದೆ. ಹಲವು ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ ಏಕ ಶ್ರೇಣಿ-ಏಕ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಯೋಧರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಈ ಯೋಜನೆಗೆ 53 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದರು.
ಮಹಿಳೆಯರನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಸೇನೆಯಲ್ಲಿ ಪುರುಷ ಸಿಬ್ಬಂದಿಯ ಸಮನಾಗಿ ಮಹಿಳೆಯರು ನಿಂತಿದ್ದಾರೆ ಎಂದರು.
ಇತ್ತೀಚೆಗೆ ಪುಲ್ವಾಮಾದಲ್ಲಿ ಬಲಿಯಾದ ಯೋಧರನ್ನು ಪ್ರತಿ ಕ್ಷಣವೂ ಸ್ಮರಿಸುತ್ತಿದ್ದೇವೆ. ಆರು ದಶಕಗಳ ಯೋಧರ ಕೊರತೆಯನ್ನು ನಮ್ಮ ಸರ್ಕಾರದ ಮೂಲಕ ಪೂರೈಸಿದ್ದೇವೆ ಎಂದು ಮೋದಿ ತಿಳಿಸಿದರು.
ರಾಷ್ಟ್ರೀಯ ಯುದ್ಧ ಸ್ಮಾರಕ ಯುವಕರಿಗೆ ಸ್ಪೂರ್ತಿಯಾಗಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆಗೊಂಡ ನಂತರ ಸೇನೆಗೆ ಸೇರಲು ಯುವಕರು ಹೆಚ್ಚು ಒಲವು ತೋರಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
PM Modi National War Memorial Inauguration