ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 104ಕ್ಕೇರಿಕೆ

ಗುವಾಹಟಿ, ಫೆ.24- ಪೂರ್ವ ಅಸ್ಸೋಂನ ಗೊಲ್ಘಾಟ್ ಹಾಗೂ ಜೊರ್ಹಟ್‍ನಲ್ಲಿ ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 104ಕ್ಕೇರಿದೆ. ಇತರ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಲ್ಮಿರಾ ಟೀ ಎಸ್ಟೇಟ್‍ನಲ್ಲಿ ಕಳ್ಳಭಟ್ಟಿ ಸೇವಿಸಿ ಅಸ್ವಸ್ಥರಾಗಿದ್ದ 200ಕ್ಕೂ ಹೆಚ್ಚು ಜನರನ್ನು ಸಮೀಪದ ಸ್ವಾಹಿದ್ ಕುಶಾಲ್ ಕೊನ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಬಕಾರಿ ಇಲಾಖೆ ಅಧಿಕಾರಿಗಳು ನಕಲಿ ಮದ್ಯದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೊಲ್ಘಾಟ್ ಜಿಲ್ಲೆಯಲ್ಲಿ 68 ಮಂದಿ ಸಾವನ್ನಪ್ಪಿದ್ದು, ಉಳಿದ 36 ಮಂದಿ ಜೊರ್ಹಟ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಎರಡು ಜಿಲ್ಲೆಗಳ ಸುಮಾರು 100 ಮಂದಿ ಜೊರ್ರಟ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ.ಹಿಮಂತ ಬಿಸ್ವಾ ಶರ್ಮ ಜೆಎಂಸಿಹೆಚ್ ಆಸ್ಪತ್ರೆಗೆ ಭೇಟಿ ನೀಡಿದ್ದು, ದಿಬ್ರುಗಢ ಹಾಗೂ ತೇಜ್‍ಪುರ ವೈದ್ಯಕೀಯ ಕಾಲೇಜುಗಳಿಂದ ಹೆಚ್ಚುವರಿ ವೈದ್ಯರನ್ನು ಕರೆಸಿಕೊಳ್ಳಲಾಗಿದೆ.

ಆಸ್ಪತ್ರೆಯಲ್ಲಿ ದಾಖಲಾದ ಅಸ್ವಸ್ಥರಿಗೆ ಉಚಿತ ಔಷಧಿ ಹಾಗೂ ರೋಗಿಗಳ ಜತೆಗಿರುವ ಸಂಬಂಧಿಕರಿಗೆ ಆಹಾರ ಪೂರೈಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಜೊರ್ಹಟ್‍ನಲ್ಲಿ ಆರು ಮಂದಿ, ಗೊಲ್ಘಾಟ್‍ನಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಗೊಲ್ಘಾಟ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ದಾಸ್ತಾನು ಮಾಡಲಾಗಿದ್ದ ಎರಡು ಗೋದಾಮುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಪ್ರಕರಣದ ತನಿಖೆ ನಡೆಸುವಂತೆ ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಅಸ್ಸೋಂ ವಿಭಾಗೀಯ ಆಯುಕ್ತರಿಗೆ ಸೂಚಿಸಿದ್ದು, ಜೊರ್ಹಟ್ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲಾಗುತ್ತಿದೆ. ಗೋಲ್ಘಾಟ್ ಪ್ರಕರಣದಲ್ಲಿ ಪ್ರತ್ಯೇಕ ವಿಭಾಗೀಯ ಅಧಿಕಾರಿ ತನಿಖೆ ನಡೆಸಲಾಗುತ್ತಿದ್ದು, ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ