ಕಲಬುರಗಿ,ಫೆ.25- ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿ ಸೇರಲು ಡಾ.ಉಮೇಶ್ ಜಾಧವ್ಗೆ ಬಂಜಾರಾ ಸಮುದಾಯದ ಮುಖಂಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಇತ್ತ ಕಲಬುರಗಿಯಲ್ಲಿ ಜಾಧವ್ ವರ್ಸಸ್ ಖರ್ಗೆ ಬೆಂಬಲಿಗರ ಫ್ಲೆಕ್ಸ್ ವಾರ್ ಸಹ ಮುಂದುವರಿದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಅತೃಪ್ತ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಪೋಟೊ ಇರುವ ಬ್ಯಾನರ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೋಟೋ ನಾಪತ್ತೆಯಾಗಿದೆ. ಬ್ಯಾನರ್ ಅಷ್ಟೇ ಅಲ್ಲ ಡಾ.ಜಾಧವ್ ಅಧ್ಯಕ್ಷತೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಪ್ರಿಯಾಂಕ್ ಹೆಸರು ಇಲ್ಲವಾಗಿದೆ.
ಸ್ವಾಗತ ಬ್ಯಾನರ್ನಲ್ಲಿ ಡಾ.ಉಮೇಶ್ ಜಾಧವ್ ಜೊತೆ ಬಿಜೆಪಿ ಮುಖಂಡರ ಪೋಟೋಗಳು ರಾರಾಜಿಸುತ್ತಿವೆ. ಬಿಜೆಪಿ ಮುಖಂಡ ಸುಭಾಷ್ ರಾಥೋಡ್ ಸೇರಿದಂತೆ ಹಲವು ನಾಯಕರ ಪೋಟೋಗಳನ್ನು ಹಾಕಲಾಗಿದೆ.
ಕಾಳಗಿ ಪಟ್ಟಣದ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 280ನೇ ಜಯಂತ್ಯುತ್ಸವನ್ನು ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಆಯೋಜನೆ ಮಾಡಲಾಗಿತ್ತು.
ಆ ವೇಳೆ ಲಂಬಾಣಿ ಸಮುದಾಯದಿಂದ ಒಬ್ಬರು ಎಂಪಿ ಆಗಲೇಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತಾವು ಲೋಕಸಭೆ ಚುನಾವಣೆಗೆ ನಿಲ್ಲಬೇಕು ಎಂದು ಸಮುದಾಯದ ಮುಖಂಡರು ಒತ್ತಡ ಹೇರಿದ್ದರು ಎಂದು ಈ ಹಿಂದೆಯೇ ಉಮೇಶ್ ಜಾದವ್ ಬಹಿರಂಗವಾಗಿಯೇ ಹೇಳಿದ್ದರು.
ಅದರಂತೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಲಂಬಾಣಿ ಸಮುದಾಯ ಕೂಡ ಬೆಂಬಲ ನೀಡಿದೆ. ಈಗಾಗಲೇ ಬಿಜೆಪಿ ಮನೆಯ ಬಾಗಿಲು ಬಳಿ ಇರುವ ಉಮೇಶ್ ಜಾದ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ರಮೇಶ್ ಜಾರಕಿಹೊಳಿಯ ಅತೃಪ್ತ ಬಣದೊಂದಿಗೆ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಒಂದು ತಿಂಗಳಿನಿಂದ ಮುಂಬೈನಲ್ಲಿ ಇದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಭೆಗೆ ಮತ್ತು ಸದನಕ್ಕೆ ಹಾಜರಾಗಬೇಕೆಂದು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿ ತೆರಳಿದ್ದ ಅವರು ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರಲಿಲ್ಲ.
ಅತೃಪ್ತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಇವರನ್ನು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದರೆ ಅದನ್ನು ತಿರಸ್ಕರಿಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಪಕ್ಷ ಬಿಡುವುದು ಖಚಿತವಾಗಿದೆ.
ಮಾರ್ಚ್ ಮೊದಲ ವಾರ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಇವರ ಜೊತೆ ಇನ್ನು ಹಲವರು ಬಿಜೆಪಿ ಸೇರುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಪಕ್ಷದಿಂದ ನೀಡಿರುವ ಪಕ್ಷಾಂತರದ ಬಗೆಗಿನ ದೂರು ಸ್ಪೀಕರ್ ಮುಂದಿದೆ.
ಕಾನೂನು ತೊಡಕು ಎದುರಾಗದಿದ್ದರೆ ಉಮೇಶ್ ಜಾಧವ್ ಅವರು ಬಿಜೆಪಿ ಸೇರುವುದು ಖಚಿತ. ಬಿಜೆಪಿಯಿಂದ ಅವರಿಗೆ ಟಿಕೆಟ್ ದೊರೆಯಲು ತೊಂದರೆಯಾದರೆ ಅವರ ಸಹೋದರ ರಾಮಚಂದ್ರ ಜಾಧವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.