ಮನೆ ಭಾಗ್ಯ..! ನಿರ್ಮಾಣ ಹಂತದ ವಸತಿ ಮೇಲಿನ ಜಿಎಸ್​ಟಿ ತೆರಿಗೆಯಲ್ಲಿ ಭಾರೀ ಇಳಿಕೆ

ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಹಾಗೂ ಸರ್ವರಿಗೂ ವಸತಿ ಕಲ್ಪಿಸುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲ ಜಿಎಸ್​ಟಿ ತೆರಿಗೆಯಲ್ಲಿ ಒಂದಷ್ಟು ಬದಲಾವಣೆ ತಂದಿದೆ. ನಿರ್ಮಾಣ ಹಂತದ ವಸತಿ ಗೃಹಗಳು ಹಾಗೂ ಸುಲಭ ವಸತಿಗಳ ಮೇಲಿನ ತೆರಿಗೆಯಲ್ಲಿ ಭಾರೀ ಇಳಿಕೆ ಮಾಡಿದೆ.

ನಿರ್ಮಾಣ ಹಂತದ ಮನೆಗಳ ಮೇಲಿನ ಜಿಎಸ್​ಟಿ ತೆರಿಗೆಯನ್ನ ಶೇ. 12ರಿಂದ 5ಕ್ಕೆ ಇಳಿಸಿದೆ. ಶೇ. 8ರಷ್ಟಿದ್ದ ಸುಲಭ ಮನೆಗಳ ಮೇಲಿನ ಜಿಎಸ್​ಟಿ ತೆರಿಗೆಯನ್ನು ಶೇ. 1ಕ್ಕೆ ಇಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇವತ್ತು ಭಾನುವಾರ ಈ ತೆರಿಗೆ ಇಳಿಕೆ ಕ್ರಮವನ್ನು ಪ್ರಕಟಿಸಿದ್ದಾರೆ.

ಜಿಎಸ್​ಟಿ ಮಂಡಳಿಯ 33ನೇ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಧ್ಯಮ ವರ್ಗದವರ ಮನೆಯ ಕನಸನ್ನು ಸಾಕಾರ ಮಾಡಲು ಇದು ನೆರವಾಗುತ್ತದೆ ಎಂದು ಅರುಣ್ ಜೇಟ್ಲಿ ಆಶಿಸಿದ್ದಾರೆ.

ಇದಕ್ಕೂ ಮುನ್ನ, ಗುಜರಾತ್​ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದ ಸಚಿವರ ರಿಯಲ್ ಎಸ್ಟೇಟ್ ವಲಯ ಮಂಡಳಿಯು ನಿರ್ಮಾಣ ಹಂತದ ವಸತಿ ಕಟ್ಟಡಗಳ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಸಲು ಹಾಗೂ ಸುಲಭ ವಸತಿ (ಅಫಾರ್ಡಬಲ್ ಹೌಸ್) ಮೇಲಿನ ತೆರಿಗೆಯನ್ನು ಶೇ. 3ಕ್ಕೆ ಇಳಿಸಲು ಶಿಫಾರಸು ಮಾಡಿತ್ತು.

ಈ ಶಿಫಾರಸನ್ನು ಈ ಹಿಂದೆಯೇ ಅನುಷ್ಠಾನಗೊಳಿಸಬೇಕಿತ್ತು. ಆದರೆ, ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ ರಾಜ್ಯಗಳು ಜಿಎಸ್​ಟಿ ಮಂಡಳಿಯ ಕ್ರಮವನ್ನು ವಿರೋಧಿಸಿದ್ದವು. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಗಮನಕ್ಕೆ ತಾರದೆಯೇ ನಿರ್ಧಾರ ಕೈಗೊಳ್ಳಲಾಗಿದ್ದು ಈ ರಾಜ್ಯಗಳ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆದು ಜಿಎಸ್​ಟಿ ಇಳಿಕೆಯ ನಿರ್ಧಾರ ಪ್ರಕಟಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ