ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಹಾಗೂ ಸರ್ವರಿಗೂ ವಸತಿ ಕಲ್ಪಿಸುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲ ಜಿಎಸ್ಟಿ ತೆರಿಗೆಯಲ್ಲಿ ಒಂದಷ್ಟು ಬದಲಾವಣೆ ತಂದಿದೆ. ನಿರ್ಮಾಣ ಹಂತದ ವಸತಿ ಗೃಹಗಳು ಹಾಗೂ ಸುಲಭ ವಸತಿಗಳ ಮೇಲಿನ ತೆರಿಗೆಯಲ್ಲಿ ಭಾರೀ ಇಳಿಕೆ ಮಾಡಿದೆ.
ನಿರ್ಮಾಣ ಹಂತದ ಮನೆಗಳ ಮೇಲಿನ ಜಿಎಸ್ಟಿ ತೆರಿಗೆಯನ್ನ ಶೇ. 12ರಿಂದ 5ಕ್ಕೆ ಇಳಿಸಿದೆ. ಶೇ. 8ರಷ್ಟಿದ್ದ ಸುಲಭ ಮನೆಗಳ ಮೇಲಿನ ಜಿಎಸ್ಟಿ ತೆರಿಗೆಯನ್ನು ಶೇ. 1ಕ್ಕೆ ಇಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇವತ್ತು ಭಾನುವಾರ ಈ ತೆರಿಗೆ ಇಳಿಕೆ ಕ್ರಮವನ್ನು ಪ್ರಕಟಿಸಿದ್ದಾರೆ.
ಜಿಎಸ್ಟಿ ಮಂಡಳಿಯ 33ನೇ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಧ್ಯಮ ವರ್ಗದವರ ಮನೆಯ ಕನಸನ್ನು ಸಾಕಾರ ಮಾಡಲು ಇದು ನೆರವಾಗುತ್ತದೆ ಎಂದು ಅರುಣ್ ಜೇಟ್ಲಿ ಆಶಿಸಿದ್ದಾರೆ.
ಇದಕ್ಕೂ ಮುನ್ನ, ಗುಜರಾತ್ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದ ಸಚಿವರ ರಿಯಲ್ ಎಸ್ಟೇಟ್ ವಲಯ ಮಂಡಳಿಯು ನಿರ್ಮಾಣ ಹಂತದ ವಸತಿ ಕಟ್ಟಡಗಳ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಸಲು ಹಾಗೂ ಸುಲಭ ವಸತಿ (ಅಫಾರ್ಡಬಲ್ ಹೌಸ್) ಮೇಲಿನ ತೆರಿಗೆಯನ್ನು ಶೇ. 3ಕ್ಕೆ ಇಳಿಸಲು ಶಿಫಾರಸು ಮಾಡಿತ್ತು.
ಈ ಶಿಫಾರಸನ್ನು ಈ ಹಿಂದೆಯೇ ಅನುಷ್ಠಾನಗೊಳಿಸಬೇಕಿತ್ತು. ಆದರೆ, ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ ರಾಜ್ಯಗಳು ಜಿಎಸ್ಟಿ ಮಂಡಳಿಯ ಕ್ರಮವನ್ನು ವಿರೋಧಿಸಿದ್ದವು. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಗಮನಕ್ಕೆ ತಾರದೆಯೇ ನಿರ್ಧಾರ ಕೈಗೊಳ್ಳಲಾಗಿದ್ದು ಈ ರಾಜ್ಯಗಳ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆದು ಜಿಎಸ್ಟಿ ಇಳಿಕೆಯ ನಿರ್ಧಾರ ಪ್ರಕಟಿಸಲಾಗಿದೆ.