ಬೆಂಗಳೂರು, ಫೆ.24- ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ನಡೆದ 12ನೇ ಏರೋ ಇಂಡಿಯಾ ಪ್ರದರ್ಶನಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿತು.
ವಿಶ್ವದ ಗಮನ ಸೆಳೆದ ಏರೋ ಇಂಡಿಯಾಕ್ಕೆ ಸರಿಸುಮಾರು ಆರು ಲಕ್ಷ ಜನ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ.
ಸರಣಿ ಅವಘಡಗಳ ನಡುವೆಯೂ ಏರೋ ಇಂಡಿಯಾದಲ್ಲಿ ಪ್ರದರ್ಶನದ ಉತ್ಸಾಹ ಕುಗ್ಗಿಲ್ಲ, ಜನಾಕರ್ಷಣೆಯೂ ಕಡಿಮೆಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಏರ್ಶೋಗೆ ಸರಿಸುಮಾರು ಐದೂವರೆ ಲಕ್ಷ ಜನ ಭೇಟಿ ನೀಡಿದ್ದರು. ಈ ಬಾರಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಯಲಹಂಕದ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ.
ಏರೋ ಇಂಡಿಯಾ ಪ್ರದರ್ಶನ ಆರಂಭಕ್ಕೂ ಆರು ದಿನಗಳ ಹಿಂದೆ ಪುಲ್ವಾಮಾದಲ್ಲಿ ಭೀಕರವಾದ ಭಯೋತ್ಪಾದಕ ದಾಳಿ ನಡೆದಿತ್ತು. 40ಕ್ಕೂ ಹೆಚ್ಚು ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಆ ಸೂತಕದ ಛಾಯೆಯೊಂದಿಗೆ ನಿಗದಿಯಾಗಿದ್ದ ಏರ್ಶೋ ಆರಂಭಗೊಳ್ಳುವುದಿತ್ತು. ಆದರೆ ಫೆ.19 ರಂದು ಸೂರ್ಯ ಕಿರಣ ಯುದ್ಧ ವಿಮಾನಗಳು ಆಗಸದಲ್ಲಿ ಪರಸ್ಪರ ತಾಗಿಕೊಂಡು ಪತನಗೊಂಡಿದ್ದಲ್ಲದೆ, ಒಬ್ಬ ಪೈಲಟ್ ಸಾವಿಗೀಡಾದರು.
ಇದು ಏರ್ಶೋ ಮೇಲೆ ಮತ್ತಷ್ಟು ಕರಿ ನೆರಳಿನ ಛಾಯೆ ಆವರಿಸುವಂತೆ ಮಾಡಿತ್ತು. ಆದರೂ ಜನರ ಉತ್ಸಾಹ ಕುಗ್ಗಿದಂತೆ ಕಾಣಲಿಲ್ಲ. ಸಾಲು ಸಾಲು ಅವಘಡಗಳು ನಡೆಯುತ್ತಲೇ ಇದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನ ಸಾಗರೋಪಾದಿಯಲ್ಲಿ ಏರ್ಶೋಗೆ ಆಗಮಿಸಿದ್ದರು.
ಪ್ರತಿನಿತ್ಯ ಸರಿಸುಮಾರು ಒಂದು ಲಕ್ಷಕ್ಕೂ ಮೀರಿದ ಜನ ಏರ್ಶೋಕ್ಕೆ ಆಗಮಿಸಿದ್ದರು. ಆದರೆ ಕೊನೆಯ ಹಿಂದಿನ ದಿನವಾದ ಫೆ.23 ರಂದು ಏರ್ಶೋಗೆ ಆಗಮಿಸಿದ್ದ ವಾಹನಗಳ ನಿಲುಗಡೆ ಸ್ಥಳದಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು .ಸುಮಾರು 304 ಕಾರುಗಳು ಸುಟ್ಟಿ ಭಸ್ಮವಾದವು.
ಅದೃಷ್ಟವಶಾತ್ ಅಗ್ನಿಶಾಮಕ ದಳ ಆಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದರಿಂದ ಪಕ್ಕದಲ್ಲೇ ಇದ್ದ ಇನ್ನೂ ಸಾವಿರಾರು ವಾಹನಗಳು ದುರಂತಕ್ಕೀಡಾಗುವುದು ತಪ್ಪಿತು. ಆದರೆ ಸುಟ್ಟು ಹೋದ ಕಾರುಗಳಲ್ಲಿ ನೂರಾರು ಮಂದಿಯ ಪಾಸ್ಪೋರ್ಟ್, ಡಿಎಲ್ಗಳು ಸೇರಿದಂತೆ ಪ್ರಮುಖ ದಾಖಲೆ ಪತ್ರಗಳು ಸುಟ್ಟು ಹೋಗಿವೆ. ಇದರಿಂದಾಗಿ ರಜಾ ದಿನವಾದ ಭಾನುವಾರ ಏರ್ಶೋಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಯಿತು.
ಈ ಎಲ್ಲಾ ಅವಘಡಗಳು ಕಾಕತಾಳೀಯ ಎಂಬಂತೆ ನಡೆದಿದ್ದರೂ ಅದರ ಹಿಂದೆ ನಾನಾ ರೀತಿಯ ಚರ್ಚೆಗಳು ಹುಟ್ಟುಕೊಂಡಿವೆ. ಏರ್ಶೋವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಈ ಅವಘಡಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ವದಂತಿಗಳು ಹರಡತೊಡಗಿವೆ.
ಏರ್ಶೋ ಆರಂಭವಾದಾಗಿನಿಂದಲೂ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಇಲ್ಲಿನ ಮೂಲಸೌಕರ್ಯಗಳು ಮತ್ತು ಎಲ್ಲಾ ವಿಧದ ಸೌಲಭ್ಯಗಳು ಏರ್ಶೋ ಹೇಳಿ ಮಾಡಿಸಿದಂತಿದೆ. ಕೇಂದ್ರ ಸಚಿವ ಸುರೇಶ್ ಪ್ರಭು ಏರ್ಶೋಗೆ ಚಾಲನೆ ನೀಡಿದ ಬಳಿಕ, ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಲ್ಲೇ ಉಳಿದು ಏರ್ಶೋನ ಉಸ್ತುವಾರಿ ನಿರ್ವಹಿಸಿದರು. ಪ್ರಧಾನಮಂತ್ರಿಗಳ ರಕ್ಷಣಾ ಸಲಹೆಗಾರರಾದ ಪ್ರೊ.ವಿಜಯರಾಘವನ್, ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅವರುಗಳು ಸ್ವದೇಶಿ ನಿರ್ಮಿತ ತೇಜಸ್ನಲ್ಲಿ ಹಾರಾಟ ನಡೆಸಿದರು.
ಹಾಗೆಯೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೇರಿದಂತೆ ಗಣ್ಯಾತಿಗಣ್ಯರು ತೇಜಸ್ ಸ್ವದೇಶಿ ನಿರ್ಮಿತ ವಿಮಾನದಲ್ಲಿ ಹಾರಾಟ ನಡೆಸಿದರು.
ಅಮೆರಿಕಾ, ಇಸ್ರೇಲ್, ರಷ್ಯಾ, ಫ್ರಾನ್ಸ್, ಉಕ್ರೇನ್, ಇಟಲಿ, ಜಪಾನ್, ಕೊರಿಯಾ, ಸ್ವಿಟ್ಜರ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಸ್ವೀಡನ್, ಇಂಗ್ಲೆಂಡ್ ಸೇರಿದಂತೆ ಹಲವಾರು ದೇಶಗಳ ವಾಯುಪಡೆಗಳು ಏರೋ ಇಂಡಿಯಾದಲ್ಲಿ ಭಾಗವಹಿಸಿದ್ದವು.
ಒಂದೆಡೆ ಲೋಹದ ಹಕ್ಕಿಗಳ ಕಲರವ ಪ್ರೇಕ್ಷಕರ ಮನಸೂರೆಗೊಂಡರೆ, ಮತ್ತೊಂದೆಡೆ ಏರ್ ಇಂಡಿಯಾ ಆಯೋಜಿಸಲಾಗಿದ್ದ 403 ಪ್ರದರ್ಶನ ಮಳಿಗೆಗಳು ಮಾಹಿತಿ ಕೇಂದ್ರಗಳಾಗಿದ್ದವು. ಅಲ್ಲಿನ ಪ್ರತಿಯೊಂದು ಮಳಿಗೆಯಲ್ಲೂ ಯುದ್ಧಸಲಕರಣೆಗಳು, ರಕ್ಷಣಾ ಸಾಮಗ್ರಿಗಳು, ದೇಶ ರಕ್ಷಣೆಗೆ ಬಳಸುವ ಪರಿಕರಗಳು, ನಾಗರಿಕ ವಿಮಾನ ಯಾನದ ವ್ಯವಸ್ಥೆಗಳು ಪ್ರದರ್ಶನಗೊಂಡವು.
ಐದು ದಿನಗಳ ಏರೋ ಇಂಡಿಯಾ ಪ್ರದರ್ಶನ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಹಲವು ಅವಘಡಗಳ ನಡುವೆಯೂ ಯಶಸ್ವಿಯಾಗಿ ತೆರೆ ಕಂಡಿದೆ.