ಲೋಕಸಭೆ ಚುನಾವಣೆ-ಕ್ಷೇತ್ರವಾರು ಸಭೆ ನಡೆಸುತ್ತಿರುವ ಜೆಡಿಎಸ್

ಬೆಂಗಳೂರು, ಫೆ.22-ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಈಗಾಗಲೇ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದು, ಕ್ಷೇತ್ರವಾರು ಸಭೆಗಳನ್ನು ನಡೆಸುತ್ತಿದೆ.

ನಾಳೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಆರು ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಾಗುತ್ತದೆ.

ನಿನ್ನೆ ಹಳೇಮೈಸೂರು ಭಾಗದ ಐದು ಲೋಕಸಭಾ ಕ್ಷೇತ್ರಗಳ ಸಭೆ ನಡೆಸಿದ್ದು, ಆಯಾ ಕ್ಷೇತ್ರಗಳ ಮುಖಂಡರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.

ಕರಾವಳಿ ಭಾಗದ ಉತ್ತರಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು-ಉಡುಪಿ, ಹೈದರಾಬಾದ್ ಕರ್ನಾಟಕ ಭಾಗದ ವಿಜಾಪುರ, ರಾಯಚೂರು ಹಾಗೂ ಮೈಸೂರು ಭಾಗದ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಸಭೆಯನ್ನು ನಾಳೆ ಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಲಿದ್ದಾರೆ.

ಲೋಕಸಭೆ ಚುನಾವಣೆಯ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ಚುನಾವಣಾ ಕಾರ್ಯತಂತ್ರ, ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದರಿಂದ ಪಕ್ಷಕ್ಕಾಗುವ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ