ಅಧಿಕಾರದ ಗದ್ದುಗೆಗೆ ಏರಿದ ಕಾಂಗ್ರೇಸ್-ಜೆಡಿಎಸ್

ಮೈಸೂರು, ಫೆ.23- ಮೈಸೂರು ಜಿಲ್ಲಾ ಪಂಚಾಯ್ತಿ ಚುನಾವಣೆ ಕುರಿತಂತೆ ತಡರಾತ್ರಿ ನಡೆದ ಕ್ಷಿಪ್ರರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ಒಂದಾಗಿ ಅಧಿಕಾರದ ಗದ್ದುಗೆಗೇರಿದೆ.

ಈವರೆಗೂ ಇದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬಿದ್ದಿದೆ. ನಿನ್ನೆ ರಾತ್ರಿಯವರೆಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಮುಂದುವರೆಸುವುದಾಗಿ ಹೇಳುತ್ತಿದ್ದ ಜೆಡಿಎಸ್ ಪಕ್ಷದ ಮುಖಂಡರು ನಿನ್ನೆ ತಡ ರಾತ್ರಿ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ವರಿಷ್ಠರ ಅಣತಿಯಂತೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಜಿಪಂನಲ್ಲಿ ಅಧಿಕಾರ ಹಂಚಿಕೊಳ್ಳುತ್ತೇವೆ ಎಂದು ಘೋಷಿಸಿದರು.

ಅಲ್ಲದೆ, ಉಳಿದ ಎರಡು ವರ್ಷದ ಅವಧಿಗೆ ಜೆಡಿಎಸ್ ಅಭ್ಯರ್ಥಿ ಒಂದು ವರ್ಷ ಅಧ್ಯಕ್ಷರಾದರೆ, ಕಾಂಗ್ರೆಸ್‍ನವರು ಒಂದು ವರ್ಷ ಅಧ್ಯಕ್ಷರಾಗಿರುತ್ತಾರೆ ಎಂದು ಸಚಿವ ಸಾ.ರಾ.ಮೇಶ್ ತಿಳಿಸಿದರು.

ಇಂದು ಬೆಳಗ್ಗೆ ನಡೆದ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರಿಮಳ ಶ್ಯಾಮ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಳಿಕೆರೆ ಗ್ರಾಮದ ಗೌರಮ್ಮ ಸೋಮಶೇಖರ್ ನಾಮಪತ್ರ ಸಲ್ಲಿಸಿದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಹದಿನಾರು ಗ್ರಾಮದ ಗುರುಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಸಬೇಕಾಯಿತು.

49 ಜಿಪಂ ಸದಸ್ಯ ಬಲದಲ್ಲಿ 21 ಜೆಡಿಎಸ್, 20 ಕಾಂಗ್ರೆಸ್, 8 ಬಿಜೆಪಿ ಅಭ್ಯರ್ಥಿಗಳಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಕಾ ವಸ್ಥೆಗೆ ನಾಮಪತ್ರ ಸಲ್ಲಿಸಿದಂತಾಗಿತ್ತು. ಕಾಂಗ್ರೆಸ್ ನಗೌರಮ್ಮ ಸೋಮಶೇಖರ್ ಆಯ್ಕೆಯಾದರು.

ಪ್ರಾದೇಶಿಕ ಆಯುಕ್ತರಾದ ಎಂ.ಜಿ.ರೂಪಾ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಪರಿಮಳಾ ಶ್ಯಾಮ್ ಹಾಗೂ ಉಪಾಧ್ಯಕ್ಷರಾದ ಗೌರಮ್ಮ ಸೋಮಶೇಖರ್ ಅವರ ಆಯ್ಕೆಯನ್ನು ಪ್ರಕಟಿಸಿದರು.

ಐದು ವರ್ಷದ ಹಿಂದೆಜಿಲ್ಲಾ ಪಂಚಾಯತ್ ಆಡಳಿತಕ್ಕೆ ಬಂದಾಗ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆಗೇರಿತ್ತು. ಮೂರು ವರ್ಷದ ನಂತರಅಧ್ಯಕ್ಷ-ಉಪಾಧ್ಯಕ್ಷರ ಬದಲಾವಣೆ ಮಾಡಲು ಮುಂದಾಗಿತ್ತು.

ಈಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಇರುವುದರಿಂದ ಬಿಜೆಪಿ ಜತೆಗಿನ ಸಂಬಂಧ ಕಡಿತಗೊಳಿಸಿಕೊಳ್ಳಬೇಕೆಂಬುದು ಕಾಂಗ್ರೆಸ್‍ನ ಇರಾದೆಯಾಗಿತ್ತು. ಆದರೆ, ಜೆಡಿಎಸ್ ನವರು ಬಿಜೆಪಿ ಜತೆಗೆ ಹೋಗಲು ಒಲವು ವ್ಯಕ್ತಪಡಿಸಿದ್ದರು.

ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷರಾಗಿ ಜೆಡಿಎಸ್‍ನವರು, ಉಪಾಧ್ಯಕ್ಷರಾಗಿ ಬಿಜೆಪಿ ಯವರು ಮುಂದುವರೆಯಲಿದ್ದಾರೆ. ಇದು ಕಳೆದ ಐದು ವರ್ಷಗಳ ಹಿಂದೆಯೇ ನಿರ್ಧಾರವಾಗಿತ್ತು ಎಂದು ತಿಳಿಸಿದ್ದರು.

ಇದರಿಂದ ಕಾಂಗ್ರೆಸ್‍ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತವರಲ್ಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಮುಖಭಂಗವಾಗಿತ್ತು. ಬಿಜೆಪಿ-ಜೆಡಿಎಸ್‍ನಎಲ್ಲಾ ಸದಸ್ಯರನ್ನು ರೆಸಾರ್ಟ್‍ಗೆ ಕರೆದೊಯ್ಯಲು ನಿರ್ಧಾರ ಮಾಡಲಾಗಿತ್ತು.ಆದರೆ, ತಡರಾತ್ರಿ ನಡೆದ ಬೆಳವಣಿಗೆಗಳು ಎಲ್ಲರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಈ ಸಂದರ್ಭದಲ್ಲಿ ಬಿಜೆಪಿ ಜತೆ ಮೈತ್ರಿಯಾದರೆತಪ್ಪು ಸಂದೇಶ ರವಾನೆಯಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಜತೆಯಲ್ಲೇ ಮೈತ್ರಿ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರ ಸ್ಪಷ್ಟ ಸೂಚನೆಯನ್ನು ಮೈಸೂರು ಜೆಡಿಎಸ್ ನಾಯಕರು ಪಾಲನೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿಯಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಜಾರಿಗೆ ಬಂದಿದೆ. ಅಧ್ಯಕ್ಷರಾಗಿ ಜೆಡಿಎಸ್‍ನವರು, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನವರು ಆಯ್ಕೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ