ವಿಜಯಪುರ, ಫೆ.22-ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ಟ್ವೀಟ್ ವಾರ್ ಅತಿರೇಕಕ್ಕೆ ಹೋಗಿದ್ದು, ಬಿಜೆಪಿ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
10 ವರ್ಷ ಸಂಸದರಾಗಿ ನೀವು ಸಾಧಿಸಿದ್ದಾದರೂ ಏನೂ? ಎಷ್ಟು ಹಳ್ಳಿಗಳಿಗೆ ನಿಮ್ಮ ಅನುದಾನ ಮುಟ್ಟಿದೆ, ಸಂಸದರ ನಿಧಿ ಎಲ್ಲಿ ಹೋಯಿತು, ಯಾವ ಯಾವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೀರಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಕೆಲ ದಿನಗಳಿಂದ ಒಳಗೊಳಗೆ ಇದ್ದ ಮುಸುಕಿನ ಗುದ್ದಾಟ ಈಗ ಬಹಿರಂಗಗೊಂಡಿದೆ. ಹೇಗಾದರೂ ಮಾಡಿ ಈ ಬಾರಿ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ತಪ್ಪಿಸಿ ಬೇರೊಬ್ಬರಿಗೆ ಕೊಡಿಸುವ ಬಗ್ಗೆ ಹುನ್ನಾರ ನಡೆದಿದೆ. ಇದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ.
ಹಿಂದುಳಿದ ವರ್ಗದ ಜಿಗಜಿಣಗಿ ಅವರಿಗೆ ಟಿಕೆಟ್ ತಪ್ಪಿಸಿದರೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು.ಆ ವರ್ಗದವರು ಅಸಮಾಧಾನಗೊಳ್ಳಬಹುದು ಎಂಬುದನ್ನು ಅರಿತ ಬಿಜೆಪಿ ವರಿಷ್ಠರು ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುವಂತಾಗಿದೆ.
ಒಟ್ಟಿನಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬುದು ಇದರಿಂದ ಗೊತ್ತಾಗಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಜೆಪಿ ಪಕ್ಷಕ್ಕೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿದ್ದು, ತೇಪೆ ಹಚ್ಚುವ ಕೆಲಸವನ್ನು ವರಿಷ್ಠರು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.