ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಬಿಜೆಪಿಯೊಂದಿಗೆ ಕೈ ಜೋಡಿಸಲಿರುವ ಜೆಡಿಎಸ್

ಮೈಸೂರು, ಫೆ.22-ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದೆಲ್ಲೆಡೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳೆರಡು ದೋಸ್ತಿಯಾಗಿ ಆಡಳಿತ ನಡೆಸುತ್ತಿದ್ದರೂ, ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರಿನಲ್ಲಿ ಎರಡೂ ಪಕ್ಷಗಳು ಕುಸ್ತಿಗೆ ಮುಂದಾಗಿರುವುದಲ್ಲದೆ, ಕಾಂಗ್ರೆಸ್‍ಗೆ ಕೈ ಕೊಡಲು ಜೆಡಿಎಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ 30 ತಿಂಗಳ ಅವಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯರನ್ನು, ಉಪಾಧ್ಯಕ್ಷರಾಗಿ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದ ಜಿಲ್ಲಾ ಪಂಚಾಯ್ತಿಯಲ್ಲಿ ಈಗ 30 ತಿಂಗಳ ಅವಧಿ ಮುಗಿದಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಲು ಜೆಡಿಎಸ್ ಮುಂದಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧ್ಯಕ್ಷ-ಉಪಾಧ್ಯಕ್ಷರಾಗಿ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕರು ಆಸೆ ಪಟ್ಟಿದ್ದರು. ಆದರೆ ಜಿ.ಪಂ.ನಲ್ಲಿ ಹಾಲಿ ಬಿಜೆಪಿ ಜೊತೆ ಇರುವ ಮೈತ್ರಿಯನ್ನೇ ಮುಂದುವರೆಸಲು ಜೆಡಿಎಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಜೆಡಿಎಸ್‍ನ ಈ ನಿರ್ಧಾರದಿಂದಾಗಿ ಕಾಂಗ್ರೆಸ್‍ಗೆ ತೀವ್ರ ಮುಜುಗರ ಉಂಟಾಗಿದೆ. ಜಿಲ್ಲಾ ಪಂಚಾಯ್ತಿಯಲ್ಲಿ ಹಳೆಯ ಮೈತ್ರಿಯನ್ನು ಮುಂದುವರೆಸಲು ಎಲ್ಲಾ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರನ್ನು ಇಂದು ರೆಸಾರ್ಟ್‍ಗೆ ಕೊಂಡೊಯ್ಯಲು ಮುಖಂಡರು ನಿರ್ಧರಿಸಿದ್ದು, ನಾಳೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ರೆಸಾರ್ಟ್‍ನಿಂದ ನೇರವಾಗಿ ಸದಸ್ಯರನ್ನು ಕರೆತರುವ ಪ್ಲ್ಯಾನ್ ರೂಪಿಸಲಾಗಿದೆ.

ಹಳೇ ದೋಸ್ತಿಯನ್ನೇ ಮುಂದುವರೆಸಲಾಗುವುದು ಎಂದು ಜೆಡಿಎಸ್ ಕೂಡ ಈಗಾಗಲೇ ಸ್ಪಷ್ಟನೆ ಕೊಟ್ಟಿದೆ. ನಾವು ಈಗಾಗಲೇ ಬಿಜೆಪಿ ಜೊತೆ 30 ತಿಂಗಳ ಅಧಿಕಾರ ನಡೆಸಿದ್ದೇವೆ.ಅವರ ಜೊತೆಯಲ್ಲೇ ಮುಂದುವರೆಯುತ್ತೇವೆ ಎಂಬ ಮಾತು ಕೂಡ ಕೊಟ್ಟಿದ್ದೇವೆ. ಹೀಗಾಗಿ ಬಿಜೆಪಿಗೆ ನಾವು ಮೋಸ ಮಾಡುವುದಿಲ್ಲ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜಿ.ಪಂ. ಸದಸ್ಯ ಬಲ 49 ಇದ್ದು, ಜೆಡಿಎಸ್-20, ಕಾಂಗ್ರೆಸ್-21, ಬಿಜೆಪಿ-8 ಸ್ಥಾನಗಳನ್ನು ಹೊಂದಿದೆ.ಒಟ್ಟು ಮ್ಯಾಜಿಕ್ ನಂಬರ್ 25 ಸ್ಥಾನಗಳ ಅಗತ್ಯವಿದ್ದು, ನಾಳೆಯೊಳಗೆ ಮೈತ್ರಿ ಯಾರೊಂದಿಗೆ ಎಂಬುದು ಖಚಿತವಾಗುತ್ತದೆ.

ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಿ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಬೆಂಬಲದೊಂದಿಗೆ ಹಾಲಿ ಇರುವ ಜೆಡಿಎಸ್ ಅಧಿಕಾರ ಮುಂದುವರೆಯಲಿದೆಯೇ ಎಂಬುದು ಕಾದುನೋಡಬೇಕು.

ಜಿಲ್ಲಾ ಪಂಚಾಯತ್‍ನ ಈ ಬೆಳವಣಿಗೆ ಮುಂದಿನ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಧಾನಸೌಧಕ್ಕೆ ನಮ್ಮ ದೋಸ್ತಿ ಸೀಮಿತ, ಸ್ಥಳೀಯ ಮಟ್ಟಕ್ಕಲ್ಲ ಎಂಬ ಸಂದೇಶ ರವಾನೆಯಾಗುವ ಸಾಧ್ಯತೆ ಇದೆ.

ಬೆಂಗಳೂರು, ತುಮಕೂರು ಸೇರಿದಂತೆ ಬಹುತೇಕ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಅಧಿಕಾರ ನಡೆಸುತ್ತಿದೆ.

ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಕೈ ಜೋಡಿಸಿದರೆ ಸಂದೇಶ ಬೇರೆಯದೇ ಆಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ. ನಾಳೆಯೊಳಗೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಪಷ್ಟನೆ: ಬಿಜೆಪಿಯೊಂದಿಗಿನ ಮೈತ್ರಿ ವಿಚಾರ ಇಂದು ಮಾಡಿಕೊಂಡ ತೀರ್ಮಾನವಲ್ಲ. ಈ ಹಿಂದೆಯೇ ಮಾಡಿಕೊಂಡ ತೀರ್ಮಾನ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಈ ಹಿಂದಿನ ಒಪ್ಪಂದದಂತೆಯೇ ಬಿಜೆಪಿ ಜೊತೆ ಹೋಗುತ್ತಿದ್ದೇವೆ. ಇದಕ್ಕೆ ನಮ್ಮ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಜಿ.ಪಂ. ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ