ಬೆಂಗಳೂರು, ಫೆ.22- ಸಭೆ, ಸಮಾರಂಭ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.
ನಗರದಲ್ಲಿಂದು ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪಕರ ಹುಟ್ಟುಹಬ್ಬ, ವಿಶ್ವ ಚಿಂತನಾ ದಿನಾಚರಣೆ ಹಾಗೂ ಬ್ರಾತೃತ್ವ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ರೋವರ್ಸ್ ಮತ್ತು ರೇಂಜರ್ಸ್ಗಳಿಗೆ ಆಹಾರ ವ್ಯರ್ಥ ಮಾಡಬಾರದು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಆಹಾರದ ಮಹತ್ವವನ್ನು ತಿಳಿಸಲು ಈ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಇತ್ತೀಚಿಗೆ ಲಿಂಗೈಕ್ಯರಾದ ಡಾ.ಶ್ರೀ ಶಿವಕುಮಾರಸ್ವಾಮಿಗಳು ಅನ್ನದಾಸೋಹಕ್ಕೆ ಮಾದರಿಯಾಗಿದ್ದವರು. ಇಂತಹ ಕಾರ್ಯಕ್ರಮಕ್ಕೆ ಅವರೇ ನಮಗೆ ಮಾರ್ಗದರ್ಶಕರೆನಿಸಿದ್ದಾರೆ ಎಂದರು.
ಕಪ್ಸ್ ಮತ್ತು ಬುಲ್ಬುಲ್ನ 10 ಸಾವಿರ ಮಕ್ಕಳಿಗೆ 20 ಜಿಲ್ಲೆಗಳಲ್ಲಿ ಪ್ರವಾಸ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಕಟಗಳನ್ನು ತೆರೆಯಲಾಗಿದೆ. ತಾಲ್ಲೂಕು ಮಟ್ಟದಲ್ಲೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಗಾಗಿ ಈ ಬಾರಿ ಆಯವ್ಯಯದಲ್ಲಿ ಏಳು ಕೋಟಿ ಒದಗಿಸಲಾಗಿದೆ. ಕಳೆದ ಬಾರಿ 10 ಕೋಟಿ ನೀಡಲಾಗಿತ್ತು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪಕರಾದ ಬಿಡನ್ಪೆÇೀಲ್ ಅವರ ಸ್ಮರಣಾರ್ಥ ವಿಶ್ವದ 175 ರಾಷ್ಟ್ರಗಳಲ್ಲಿ ಇಂದಿನ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಸಂಸ್ಥಾಪನಾ ದಿನ ಏರ್ಪಡಿಸಲಾಗಿತ್ತು. ರಾಜ್ಯದಲ್ಲಿ ಒಟ್ಟು ಐದೂವರೆ ಲಕ್ಷದಷ್ಟು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಶಿಸ್ತು, ಶಾಂತಿ ಹಾಗೂ ಸೋದರತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದರೊಂದಿಗೆ ನಾಯಕತ್ವದ ಗುಣ ಬೆಳೆಸುವ ಶಿಕ್ಷಣಕ್ಕೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಭಾರತೀಯ ಅಂಚೆ ಇಲಾಖೆ ವತಿಯಿಂದ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು.
ರಾಜ್ಯ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಅರವಿಂದ್ ವರ್ಮಾ, ಹಿರಿಯ ಅಧೀಕ್ಷಕ ಸಂದೇಶ್ ಮಹದೇವಪ್ಪ, ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಮಂಜುಳಾ, ರಾಜ್ಯ ತರಬೇತಿ ಆಯುಕ್ತರಾದ ಶಾಮಲಾ, ಗೀತಾ ನಟರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.