ಬೆಂಗಳೂರು, ಫೆ.20- ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ರದ್ದುಗೊಳಿಸಬೇಕೆಂದು ಕೋರಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ವರು ಸಲ್ಲಿಸಿದ ಅರ್ಜಿ ವಿಚಾರಣೆ ಕಲಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿಂದು ನಡೆಯಿತು.
ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದರು. ನಮ್ಮ ಕಕ್ಷಿದಾರರು ಶಾಸಕ ನಾಗನಗೌಡ ಕುಂದಕೂರ್ ಅವರಿಗೆ ಲಂಚ ಕೊಡುತ್ತೇನೆ ಎಂದು ಎಲ್ಲೂ ಹೇಳಲಿಲ್ಲ. ಅವರ ಪುತ್ರ ಶರಣಗೌಡರಿಗೆ ಚುನಾವಣಾ ಖರ್ಚು, ವೆಚ್ಚಕ್ಕಾಗಿ 10 ಕೋಟಿ ಕೊಡುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಲಂಚ ಎಂದು ಎಲ್ಲೂ ಹೇಳಲಿಲ್ಲ. ಹಾಗಾಗಿ ಎಫ್ಐಆರ್ನ್ನು ರದ್ದುಪಡಿಸಬೇಕೆಂದು ಕೋರಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಣ ನೀಡುತ್ತೇವೆ ಎಂದು ಹೇಳಲಿಲ್ಲ. ಉದ್ದೇಶ ಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂದು ನಾಗೇಶ್ ಅವರು ತಮ್ಮ ವಾದದಲ್ಲಿ ತಿಳಿಸಿದ್ದಾರೆ.
ರಾಯಚೂರಿನ ದೇವದುರ್ಗದ ಸರ್ಕಾರಿ ಅತಿಥಿ ಗೃಹದಲ್ಲಿ ನಾಗನಗೌಡರ ಪುತ್ರನೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಪ್ರೀತಮ್ಗೌಡ, ಶಿವನಗೌಡ ನಾಯಕ್, ಪತ್ರಕರ್ತ ಮರ್ಮಗಲ್ ಅವರು ಪಕ್ಷಕ್ಕೆ ಸೆಳೆಯಲು ಯತ್ನ ನಡೆಸಿದ್ದರು ಎನ್ನಲಾಗಿದ್ದು, ಈ ಸಂಬಂಧದ ಆಡಿಯೋವನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು.
ಈ ಪ್ರಕರಣ ಸಂಬಂಧ ಯಡಿಯೂರಪ್ಪ ಮತ್ತಿತರರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಕಲಬುರ್ಗಿ ಹೈಕೋರ್ಟ್ನಲ್ಲಿ ಇಂದಿನಿಂದ ವಿಚಾರಣೆ ಆರಂಭವಾಗಿದ್ದು, ಯಡಿಯೂರಪ್ಪ ಪರ ವಕೀಲರಾದ ನಾಗೇಶ್ ಅವರು ತಮ್ಮ ವಾದ ಮಂಡಿಸಿದ್ದಾರೆ.