ಬೆಂಗಳೂರು, ಫೆ.20-ಸೂರ್ಯಕಿರಣ ಯುದ್ಧ ವಿಮಾನಗಳು ಪತನಗೊಂಡ ಸ್ಥಳದಲ್ಲಿ ಪೊಲೀಸರು ಅಕ್ಷರಶಃ ದಿಗ್ಬಂಧನ ವಿಧಿಸಿದ್ದು, ಸುತ್ತಮುತ್ತಲ ನಿವಾಸಿಗಳು ಮನೆಯಿಂದ ಹೊರ ಬಾರದಂತೆ ತಡೆಯೊಡ್ಡಿದ್ದಾರೆ.
ಏರ್ಶೋ ಹಿನ್ನೆಲೆಯಲ್ಲಿ ನಿನ್ನೆ ತಾಲೀಮು ನಡೆಸುತ್ತಿದ್ದ ಸೂರ್ಯಕಿರಣ ಯುದ್ಧವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಕೆಳಕ್ಕೆ ಬಿದಿದ್ದವು. ಆ ವಿಮಾನಗಳು ಬಿದ್ದ ಸ್ಥಳಗಳಾದ ಯಲಹಂಕ ಬಳಿಯ ಹಾರೋಹಳ್ಳಿ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಅಪಘಾತಕ್ಕೆ ಕಾರಣ ಕಂಡು ಹಿಡಿಯುವ ಸಲುವಾಗಿ ಏರ್ಫೋರ್ಸ್ನ ಮೇಲಾಧಿಕಾರಿಗಳು ಮತ್ತು ತನಿಖಾ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿವೆ. ಸ್ಥಳದಲ್ಲಿ ಛಿದ್ರವಾಗಿ ಬಿದ್ದಿರುವ ವಿಮಾನಗಳ ಅವಶೇಷಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಪ್ರತಿಯೊಂದು ಜಾಗ ಮತ್ತು ಅವಶೇಷಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಏರ್ಫೋರ್ಸ್ನ ಅಧಿಕಾರಿಗಳು, ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಆದರೆ, ಈ ತನಿಖೆ ಸ್ಥಳೀಯರಿಗೆ ಉಸಿರುಕಟ್ಟಿಸುವ ವಾತಾವರಣ ನಿರ್ಮಿಸಿದೆ. ಏರ್ಫೋರ್ಸ್ ಅಧಿಕಾರಿಗಳ ತನಿಖೆ ಹಿನ್ನೆಲೆಯಲ್ಲಿ ಪೊಲೀಸರು ಇಡೀ ಜಾಗವನ್ನು ಆಕ್ರಮಿಸಿಕೊಂಡಿದ್ದು, ಸುತ್ತಮುತ್ತಲ ನಿವಾಸಿಗಳು ಮನೆಯಿಂದ ಹೊರಗೆ ಬರದಂತೆ ತಡೆಯೊಡ್ಡಿದ್ದಾರೆ.
ಹಾಲು, ತರಕಾರಿ ತರಲೂ ನಿವಾಸಿಗಳು ಹೊರ ಹೋಗಲು ಬಿಡದಂತೆ ತಡೆಯಲಾಗಿದೆ. ಬಹಳಷ್ಟು ಮಂದಿ ಕೆಲಸಕ್ಕೂ ಹೋಗಲಾಗದೆ ಪೊಲೀಸರ ದಿಗ್ಬಂಧನದಿಂದ ಪರದಾಡಿದ್ದಾರೆ.
ವಿಮಾನದ ಅವಶೇಷಗಳು ಅತ್ಯಮೂಲ್ಯವಾಗಿದ್ದು, ಸ್ಥಳೀಯರು ಆ ಜಾಗದಲ್ಲಿ ಓಡಾಡಿದರೆ ಅವಶೇಷಗಳು ನಾಪತ್ತೆಯಾಗಬಹುದು. ಆಗಾಗಿ ಏರ್ಫೋರ್ಸ್ನ ತನಿಖಾಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸುವವರೆಗೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸರು ಹೇಳಿರುವುದಾಗಿ ತಿಳಿದು ಬಂದಿದೆ.