ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಲಿರುವ ಕೆಪಿಸಿಸಿ ಅಧ್ಯಕರು

ಬೆಂಗಳೂರು, ಫೆ.21- ಲೋಕಸಭಾ ಚುನಾವಣೆ ಸೀಟು ಹಂಚಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷೆ ಎಚ್.ಡಿ.ದೇವೇಗೌಡ ಅವರು ಇಂದು ಮಹತ್ವದ ಮಾತುಕತೆ ನಡೆಸುವ ಸಾಧ್ಯತೆಯಿದೆ.

ದೋಸ್ತಿ ಪಕ್ಷಗಳು ಒಟ್ಟಾಗಿ ಹೋದರೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂಬ ಉಭಯ ಪಕ್ಷದ ನಾಯಕರು ಮಾತುಕತೆಗೆ ಮುಂದಾಗಿದ್ದು, ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟುಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾವೇನು ಬೆಗ್ಗರ್ಸ್ ಅಲ್ಲ ಎನ್ನುವ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರು ಯಾರಿಗೂ ಬೆಗರ್ಸ್ ಅಲ್ಲ, ಎಲ್ಲರೂ ಸರಿಸಮಾನರು ಒಟ್ಟಾಗಿ ಆಡಳಿತ ನಡೆಸುತ್ತಿದ್ದೇವೆ. ಒಟ್ಟಾಗಿ ಚುನಾವಣೆ ನಡೆಸುವುದು ಸೂಕ್ತ ಎಂಬ ಪ್ರತಿ ಹೇಳಿಕೆ ನೀಡಿದ್ದರು.

ಬಿಜೆಪಿ ನಿರಂತರವಾಗಿ ನಡೆಸಿದ ಆಪರೇಷನ್ ಕಮಲ ಚಟುವಟಿಕೆಯಿಂದ ಜೆಡಿಎಸ್-ಕಾಂಗ್ರೆಸ್ ನಡುವಿನ ಭಿನ್ನಮತ ದೂರವಾಗಿ ಮೈತ್ರಿ ಮತ್ತಷ್ಟು ಗಟ್ಟಿಯಾಗಿದ್ದು, ಪ್ರಸ್ತುತ ಸೀಟು ಹಂಚಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಬೇಕಾಗಿದೆ. ಅದಕ್ಕಾಗಿ ನಾಯಕರು ಮಾತುಕತೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್‍ನ ಹಾಲಿ ಇರುವ ಸ್ಥಾನವನ್ನು ಬಿಟ್ಟುಕೊಡಲು ಜೆಡಿಎಸ್ ಕೇಳುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸುತಾರಾಮ್ ಒಪ್ಪುತ್ತಿಲ್ಲ, ಗೆಲುವನ್ನು ಮಾನದಂಡವಾಗಿಟ್ಟುಕೊಂಡು ಎರಡು ಪಕ್ಷಗಳು ಕೆಲವು ತ್ಯಾಗಕ್ಕೆ ಮುಂದಾಗಿವೆ. 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ಗುರಿ ಹೊಂದಿವೆ. ಒಟ್ಟಾರೆ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಮೈತ್ರಿ ಪಕ್ಷಗಳ ಗುರಿಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಎನ್‍ಡಿಎಯನ್ನು ಕಟ್ಟಿ ಹಾಕಲು ಕಾಂಗ್ರೆಸ್-ಜೆಡಿಎಸ್ ನಾಯಕರು ತಂತ್ರ ರೂಪಿಸಿದ್ದಾರೆ.

ಈ ಸಂಬಂಧ ಇಂದು ಮಾಜಿಪ್ರಧಾನಿ ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೈತ್ರಿಯಾಗಿಯೇ ಚುನಾವಣೆ ಎದುರಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದೆ.

ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ನಾಯಕರು ಮಾತುಕತೆಗೆ ಮುಂದಾಗಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೀದರ್, ಬೆಳಗಾವಿ, ಉತ್ತರಕನ್ನಡ, ದಕ್ಷಿಣಕನ್ನಡ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಬೆಂಬಲ ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂದು ತಿಳಿದು ಬಂದಿದೆ.

ಎಷ್ಟು ಕ್ಷೇತ್ರಗಳಲ್ಲಿ ಮೈತ್ರಿಯಾಗಲಿದೆ ಎಂಬುದು ಮಾತುಕತೆಯ ನಂತರ ತಿಳಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ