ಚಳ್ಳಕೆರೆ, ಫೆ. 19- ದೇವಾಲಯದ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ದೇವರ ಮುಂದೆ ಇದ್ದಂತಹ ಹುಂಡಿಯಲ್ಲಿರುವ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ ನಗರದ ಹಳೆಟೌನ್ ಬಳಿಯಿರುವ ಪೇಟೇ ಆಂಜನೇಯ ಸ್ವಾಮಿ ದೇವಾಲಯದ ಹಿಂಬಾಗಿಲನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆ.
ದೇವರ ಮುಂದೆ ಇರುವ ಹುಂಡಿಯ ಬೀಗವನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಇಂದು ಬೆಳಿಗ್ಗೆ ದೇವಾಲಯದ ಅರ್ಚಕರು ದೇವರ ಪೂಜೆಗೆಂದು ತೆರಳಿದ್ದಾಗಲೇ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ತಕ್ಷಣವೇ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಗೋಪನಹಳ್ಳಿ ಗ್ರಾಮದಲ್ಲಿರುವ ಮಾರಮ್ಮ ದೇವಾಲಯದಲ್ಲೂ ಕಳ್ಳರು ದೇವರ ಬಳಿ ಇರುವ ಹುಂಡಿಯನ್ನು ಕದ್ದು ಪರಾರಿಯಾಗಿದ್ದರು. ಇಂದು ಗ್ರಾಮದ ಸೇತುವೆ ಬಳಿ ಹುಂಡಿಯು ಪತ್ತೆಯಾಗಿದೆ.
ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.