ದೊಡ್ಡ ಇತಿಹಾಸವೊಂದಿರುವ ಸೂರ್ಯಕಿರಣ್ ಸಾಹಸಿಗಳ ಪೈಲಟ್‍ಗಳ ತಂಡ

ಬೆಂಗಳೂರು: ಸೂರ್ಯಕಿರಣ್ ಸಾಹಸಿ ಪೈಲಟ್‍ಗಳ ವಿಶೇಷ ತಂಡ ರಚನೆ ಹಿಂದೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲೆ ಅಂದರೆ 1944ರಲ್ಲೇ ಭಾರತೀಯ ವಾಯುಪಡೆ ಬಾನಂಗಳದಲ್ಲಿ ಚಮತ್ಕಾರ ನಡೆಸುವ ವಿಶೇಷ ವಿಮಾನಗಳ ಪೈಲಟ್‍ಗಳ ತಂಡವೊಂದನ್ನು ಕಟ್ಟಿತ್ತು.

1982ರಲ್ಲಿ ಭಾರತೀಯ ವಾಯುಪಡೆಯ ವಜ್ರಮಹೋತ್ಸವದ ಅಂಗವಾಗಿ ಈ ತಂಡದ ನುರಿತ ಪೈಲಟ್‍ಗಳ ವಾಯು ಸಾಹಸ ಚಮತ್ಕಾರ ವಿಶೇಷ ತಂಡವೊಂದನ್ನು ಮತ್ತೆ ರಚಿಸಲಾಯಿತು. ಇದಕ್ಕೆ ಥಂಡರ್ ಬೋಲ್ಟ್ ಎಂದು ನಾಮಕರಣ ಮಾಡಲಾಯಿತು.

ನಂತರ ಈ ತಂಡವನ್ನು ಮತ್ತು ಈ ತಂಡ ಚಮತ್ಕಾರ ಪ್ರದರ್ಶಿಸುತ್ತಿದ್ದ ಸೂರ್ಯಕಿರಣ್ ವಿಮಾನಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಯಿತು.

1996ರಲ್ಲಿ ಪ್ರಪ್ರಥಮ ಬಾರಿಗೆ ದೊಡ್ಡ ಮಟ್ಟದಲ್ಲಿ ಸಾರ್ವಜನಿಕವಾಗಿ ಈ ವಿಮಾನಗಳ ಸಾಹಸ ಪ್ರದರ್ಶನ ಬಾನಂಗಳದಲ್ಲಿ ನಡೆಯಿತು.

ಆಗ ವಿಂಗ್ ಕಮಾಂಡರ್ ಕುಲದೀಪ್ ಮಲ್ಲಿಕ್ ನೇತೃತ್ವದ ತಂಡ ಪ್ರದರ್ಶಿಸಿದ ರೋಚಕ ಕಸರತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಿತು.

ಈ ಸೂರ್ಯಕಿರಣ ತಂಡವು ಆಗಿನಿಂದ ಇಲ್ಲಿಯವರೆಗೆ ಶ್ರೀನಗರದಿಂದ ತಿರುವನಂತಪುರಂ ತನಕ, ಉತ್ತರದಿಂದ ದಕ್ಷಿಣದವರೆಗೆ 72 ನಗರಗಳಲ್ಲಿ 500ಕ್ಕೂ ಹೆಚ್ಚು ರೋಚಕ ಪ್ರದರ್ಶನ ನೀಡಿ ಗಮನ ಸೆಳೆದಿದೆ.

ಅಲ್ಲದೆ, ಶ್ರೀಲಂಕಾ, ಮ್ಯಾನ್ಮರ್, ಥೈಲ್ಯಾಂಡ್, ಸಿಂಗಪುರ್ ಮೊದಲಾದ ದೇಶಗಳಲ್ಲೂ ವಾಯು ಕಸರತ್ತು ಪ್ರದರ್ಶಿಸಿ ಜನಮನ ಗೆದ್ದಿದೆ.

ಸೂರ್ಯಕಿರಣ ಮತ್ತು ಅದರ ತಂಡವು ಏರೋ ಇಂಡಿಯಾದ ಪ್ರತಿಷ್ಠಿತ ಏರೋ ಅಕ್ರೋಬ್ಯಾಟ್ ಖಾಯಂ ಸದಸ್ಯತ್ವ ಹೊಂದಿದ್ದು, ನೋಡುಗರಿಗೆ ರೋಮಾಂಚಕಾರಿ ಅನುಭವ ನೀಡುತ್ತಿದೆ.

ಸದ್ಯ ಬ್ರಿಟನ್‍ನಿಂದ ಹಾಕ್ ಯುದ್ಧ ವಿಮಾನಗಳ ಖರೀದಿ ನಂತರ ಎಚ್‍ಎಎಲ್ ಜೊತೆ ಒಡಂಬಡಿಕೆ ಮಾಡಿಕೊಂಡು ಭಾರತದಲ್ಲೇ ತಯಾರಿಸಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ