ಟಿ.ನರಸೀಪುರ,ಫೆ.19- ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಅಂಗವಾಗಿ ವಾರಣಾಸಿ ಮಾದರಿಯಲ್ಲಿ ನಡೆದ ದೀಪಾರತಿ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು.
ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11ನೇ ಮಹಾಕುಂಭಮೇಳದ ಅಂತಿಮ ದಿನ ಲಕ್ಷಂತರ ಭಕ್ತಾಧಿಗಳು ಕಾವೇರಿ, ಕಪಿಲಾ, ಸ್ಪಟಿಕ ಸರೋವರ ಸಂಗಮ ಸ್ಥಳದಲ್ಲಿ ಪವಿತ್ರ ಪುಣ್ಯಸ್ನಾನ ಮಾಡಿದರು.
ಪುಣ್ಯ ಸ್ನಾನಕ್ಕೆ ಪ್ರಶಸ್ತವಾದ ದಿನವಾದ ಇಂದು ಮುಂಜಾನೆಯಿಂದಲೇ ಭಕ್ತಾಧಿಗಳು ಸಂಗಮಕ್ಕೆ ತಂಡೋಪ ತಂಡವಾಗಿ ಆಗಮಿಸಿದ್ದರು.
ನೆರೆಯ ತಮಿಳುನಾಡು, ಆಂಧಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ಆಗಮಿಸಿದ್ದ ಭಕ್ತಾದಿಗಳು ಪವಿತ್ರ ಪುಣ್ಯ ಸ್ನಾನ ಮಾಡಿ ಅಗಸ್ತ್ಯೇಶ್ವರ, ಗುಂಜಾನರಸಿಂಹ ಸ್ವಾಮಿ, ಭಿಕ್ಷೇಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಇದಕ್ಕೂ ಮೊದಲು ಮುಂಜಾನೆ 5.30ರ ವೇಳೆಗೆ ನದಿ ಮದ್ಯದ ಯಾಗಮಂಟಪದಲ್ಲಿ ಮಾಘಶುಧ್ಧ ವ್ಯಾಸ ಪೂರ್ಣಿಮಾ, ಪುಷ್ಯನಕ್ಷತ್ರ, ಪುಣ್ಯಾಹ, ಕಲಶಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ ಹಾಗೂತ್ರಿವೇಣಿ ಸಂಗಮದಲ್ಲಿ ಸಪ್ತ ನದಿಗಳಿಂದ ತರಲಾಗಿದ್ದ ಕಲಶ ತೀರ್ಥವನ್ನು ಸಂಗಮದಲ್ಲಿ ಸಂಯೋಜನೆ ಮಾಡಲಾಯಿತು.