ಪ್ರಯಾಗ್‍ರಾಜ್ ಮಾದರಿಯಲ್ಲಿ ಇಲ್ಲಿನ ಕುಂಭಮೇಳ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು: ಮುಖ್ಯಮಂತ್ರಿ ಕುಮಾರಸ್ವಾಮಿ

ತಿ.ನರಸೀಪುರ,ಫೆ. 19- ಉತ್ತರ ಭಾರತದ ಪ್ರಯಾಗದ ಮಾದರಿಯಲ್ಲಿ ದಕ್ಷಿಣ ಭಾರತದ ಇಲ್ಲಿನ ಕುಂಭಮೇಳ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದ ಗಂಗಾ ಪೂಜೆ ಹಾಗೂ ದೀಪಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕುಂಭಮೇಳ ಉತ್ತರ ಭಾರತ ನಗರಗಳಲ್ಲಿ ನಡೆಯುವ ರೀತಿಯಲ್ಲೇ ಪ್ರಸಿದ್ಧಿಯಾಗಬೇಕು. ದಕ್ಷಿಣ ಭಾರತದ ಜನರು ಈ ಕ್ಷೇತ್ರದ ಕುಂಭಮೇಳದಲ್ಲಿ ಭಾಗವಹಿಸುವಂತಾಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಚಿಂತನೆ ಮಾಡಲಾಗುವುದು ಎಂದು ಹೇಳಿದರು.

ಈ ಕುಂಭಮೇಳ ನಾಡಿನ ಜನತೆಗೆ ಒಳಿತು ಮಾಡಲಿ, ಸಮೃದ್ಧಿಯನ್ನು ತರಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತೇನೆ. ಮಳೆಯಾದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿದು ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೀಪಾರತಿ ಹಾಗೂ ಗಂಗಾ ಪೂಜೆ : ಇದಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಪುಟ್ಟರಾಜು, ಜಿ.ಟಿ ದೇವೇಗೌಡ, ಸಾ. ರಾ ಮಹೇಶ್ ಎಚ್. ವಿಶ್ವನಾಥ್ ಹಾಗೂ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಶ್ರೀ ಸೇರಿದಂತೆ ವಿವಿಧ ಮಠಾಧೀಶರ ಜತೆ ಕುಳಿತು ಗಂಗಾ ಪೂಜೆ ಹಾಗೂ ದೀಪಾರತಿಯನ್ನು ವೀಕ್ಷಿಸಿದರು.

ಕಾಶಿಯಿಂದ ಬಂದಿದ್ದ ವಿದ್ಯಾರ್ಥಿಗಳು ದೀಪಾರತಿ ವಿವಿಧ ಭಕ್ತಿಗೇತೆಗಳಿಗೆ ನೃತ್ಯ ಪ್ರದರ್ಶನ ನೀಡಿ ಭಕ್ತಿ ಭಾವದೊಂದಿಗೆ ದೀಪಗಳನ್ನು ಪ್ರದರ್ಶಿಸಿ ಅದ್ಭುತ ನೃತ್ಯ ಪ್ರದರ್ಶನ ನೀಡಿದರು .

ಮುಖ್ಯಮಂತ್ರಿಗಳು ಗಂಗಾಪೂಜೆ ಮಾಡಿದ ಬಳಿಕ ಮಠದ ವಿದ್ಯಾರ್ಥಿಗಳು ದೀಪಗಳನ್ನು ನದಿಯಲ್ಲಿ ತೇಲಿ ಬಿಟ್ಟರು. ಆಕರ್ಷಕ ಬಣ್ಣ ಬಣ್ಣದ ರಾಕೆಟ್ ಪಟಾಕಿಗಳನ್ನು ಹಾರಿಬಿಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ