ಬೆಂಗಳೂರು, ಫೆ.19-ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿ ಹತ್ಯೆಗೈದಿರುವ ಭಯೋತ್ಪಾದಕರ ಹುಟ್ಟಡಗಿಸಲು ಛತ್ರಪತಿ ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧ ತಂತ್ರಗಾರಿಕೆಯನ್ನು ಕೇಂದ್ರ ಸರ್ಕಾರ ಅನುಸರಿಸಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಲಹೆ ನೀಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದರು.
ದಾಳಿಗೆ ಪ್ರತೀಕಾರವಾಗಿ ಯುದ್ಧ ಮಾಡಬೇಕೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.ಯುದ್ಧದ ಕೊನೆಯ ಅಸ್ತ್ರ ಅಣುಬಾಂಬ್.ಈಗಾಗಲೇ ಹಿರೋಷಿಮಾ-ನಾಗಾಸಾಕಿ ಮೇಲೆ ಅಣುಬಾಂಬ್ ಬಿದ್ದು, ಮೂರೂವರೆ ಲಕ್ಷ ಜನ ಸಾವನ್ನಪ್ಪಿದ್ದರು.ಅದರ ಪರಿಣಾಮ ನೆನಪಿಸಿಕೊಂಡರೆ ಯುದ್ಧ ಬೇಡವೆನಿಸುತ್ತದೆ. ಹಾಗೆಂದು ಉಗ್ರರ ದಾಳಿಯನ್ನು ನೋಡಿ ನಾವು ಶಾಂತಿ ಪ್ರಿಯರು ಎಂದುಕೊಂಡು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಪದೇ ಪದೇ ವಿದ್ರೋಹಿ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕಾಗಿದೆ. ಹಾಗಾಗಿ ಗೆರಿಲ್ಲಾ ಮಾದರಿಯ ಯುದ್ಧ ತಾಂತ್ರಿಕತೆಯನ್ನು ಅನುಸರಿಸಿ ಶತ್ರುಗಳನ್ನು ಮಣಿಸಬೇಕು ಎಂದರು.
ಶಿವಾಜಿ ಮಹಾರಾಜರು 52 ವರ್ಷ ಬದುಕಿದ್ದರೂ ಅದರಲ್ಲಿ 30 ವರ್ಷ ಯುದ್ಧ ಮಾಡುತ್ತಲೇ ಇದ್ದರು. ದೇಶದ್ರೋಹಿಗಳು, ಸ್ತ್ರೀಪೀಡಕರು ಸೇರಿದಂತೆ ಎಲ್ಲರ ವಿರುದ್ಧ ಯುದ್ಧ ಮಾಡಿದ್ದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಅಖಂಡ ಹಿಂದೂಸ್ತಾನ ಇಂದು ಒಂದಾಗಿದೆ ಎಂದರೆ ಅದಕ್ಕೆ ಶಿವಾಜಿ ಮಹಾರಾಜರೇ ಕಾರಣ. ಅವರ ಆಡಳಿತದಲ್ಲಿ ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಾರಿಕೆ ಅನುಸರಿಸಿ ದೊಡ್ಡ ದೊಡ್ಡ ಸೈನ್ಯಗಳನ್ನು ಸೋಲಿಸಿದ್ದರು. ವಿಯೆಟ್ನಾಂ ಸಣ್ಣ ದೇಶವಾಗಿದ್ದು, ಅಮೆರಿಕದಂತಹ ದೊಡ್ಡ ಸೇನೆಯನ್ನು ಯುದ್ಧದಲ್ಲಿ ಮಣಿಸಿತ್ತು. ಅದರ ಯಶಸ್ಸಿನ ರಹಸ್ಯದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಲ್ಲಿನ ರಾಷ್ಟ್ರಾಧ್ಯಕ್ಷರು ತಾವು ಛತ್ರಪತಿ ಶಿವಾಜಿಯವರ ಗೆರಿಲ್ಲಾ ಮಾದರಿ ಯುದ್ಧ ತಂತ್ರಗಾರಿಕೆ ಅನುಸರಿಸಿದ್ದರಿಂದ ಅಮೆರಿಕಾವನ್ನು ಸೋಲಿಸಲು ಸಾಧ್ಯವಾಯಿತು ಎಂದು ಹೇಳಿದ್ದರು.
ನಮ್ಮ ಭಾರತ ಸರ್ಕಾರವು ಗೆರಿಲ್ಲಾ ಮಾದರಿಯನ್ನು ಅನುಸರಿಸಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ಸಿಂಧ್ಯಾ ಕರೆ ನೀಡಿದರು.
ಶಿವಾಜಿ ಮಹಾರಾಜ್ ಯಾವುದೋ ಒಂದು ಜಾತಿಗೆ ಸೀಮಿತರಾದವರಲ್ಲ. ಅವರ ಸೇನೆಯಲ್ಲಿ ಅಲ್ಪಸಂಖ್ಯಾತರಿದ್ದರು, ಬುಡಕಟ್ಟು ಸಮುದಾಯದವರಿದ್ದರು. ಎಲ್ಲಾ ಜಾತಿ ಜನಾಂಗಗಳಿಗೂ ಸಮಾನ ಆದ್ಯತೆ ನೀಡುತ್ತಿದ್ದರು.ಯುದ್ಧ ಕಲೆಗೆ ಅಷ್ಟೇ ಶಿವಾಜಿಯವರು ಪ್ರಖ್ಯಾತರಲ್ಲ, ಆಡಳಿತಾತ್ಮಕ ವಿಷಯದಲ್ಲೂ ಮಾದರಿಯಾಗಿದ್ದರು. ಬರಗಾಲದ ಪರಿಸ್ಥಿತಿಯಲ್ಲಿ ತೆರಿಗೆ ವಸೂಲಿ ಮಾಡದೆ ಜನಸ್ನೇಹಿ ಆಡಳಿತ ನೀಡುತ್ತಿದ್ದರು ಎಂದು ಸ್ಮರಿಸಿದರು.
ಶಿವಾಜಿ ಮಹಾರಾಜರು ಬರೆದಿರುವ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಬೇಕು.ಮರಾಠ ಸಮುದಾಯವನ್ನು ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಬೇಕು.ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಿಂಧ್ಯಾ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕಾರವಾರ ಮುಂಡಗೋಡಿನ ಶ್ರೀ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಮರಾಠ ಪರಿಷತ್ನ ಅಧ್ಯಕ್ಷ ಎಸ್.ಸುರೇಶ್ರಾವ್ ಸಾಟೆ, ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಎಸ್.ಮೋನೋಜ್, ಮಾರುತಿರಾವ್ ಮೋರೆ, ಬಿಬಿಎಂಪಿ ಸದಸ್ಯರಾದ ಗಣೇಶರಾವ್ ಮಾನೆ, ಗೋಪಾಲಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಜಂಟಿ ನಿರ್ದೇಶಕರಾದ ಬಸವರಾಜ್ ಹೂಗಾರ್, ಕಿರಣ್ ಗಾಜನೂರು ಮತ್ತಿತರರಿದ್ದರು.