
ಕುಣಿಗಲ್, ಫೆ.19- ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರ ಮೇಲೆ ಶಾಸಕ ಸಿ.ಟಿ.ರವಿ ಕಾರು ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ 2.30ರ ವೇಳೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಊರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಸುನಿಲ್ಗೌಡ(27), ಶಶಿಕುಮಾರ್(28) ಮೃತ ದುರ್ದೈವಿಗಳು.
ಈ ಇಬ್ಬರು ಯುವಕರು ಧರ್ಮಸ್ಥಳಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಮಂಗಳೂರು ಕಡೆಯಿಂದ ಬಂದ ಶಾಸಕ ಸಿ.ಟಿ.ರವಿ ಅವರ ಫಾರ್ಚೂನರ್ ಕಾರು ರಸ್ತೆ ಬದಿ ಮೂತ್ರವಿಸರ್ಜನೆ ಮಾಡುತ್ತಿದ್ದ ಸುನಿಲ್ಗೌಡ ಮತ್ತು ಶಶಿಕುಮಾರ್ ಎಂಬುವವರ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮುನಿರಾಜು, ಜಯಚಂದ್ರ, ಪುನೀತ್, ಮಂಜುನಾಥ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕುಣಿಗಲ್ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಶಾಸಕ ಸಿ.ಟಿ.ರವಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂದು ಬೆಳಗಿನ ಜಾವ ಡಿಸ್ಜಾರ್ಜ್ ಆಗಿದ್ದಾರೆ.
ಈ ನಡುವೆ ಮೃತ ವ್ಯಕ್ತಿಗಳ ಕುಟುಂಬಸ್ಥರು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.