ನಿಗಮ ಮಂಡಳಿ ನೇಮಕಾತಿಗೆ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಪಾಲಿನ ನಿಗಮಮಂಡಳಿ, ಸಂಸದೀಯ ಕಾರ್ಯದರ್ಶಿ ಹಾಗೂ ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಈ ನೇಮಕಾತಿಗಳನ್ನು ಮಾಡಲು ಉದ್ದೇಶಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು 9 ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಇನ್ನೂ ಜೆಡಿಎಸ್ ಶಾಸಕರು ಹಾಗೂ ಮುಖಂಡರಿಗೆ ನಿಗಮ ಮಂಡಳಿಗಳಿಗೆ ನೇಮಕಾತಿ ಭಾಗ್ಯ ದೊರೆತಿಲ್ಲ.

ಹೀಗಾಗಿ ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮೇಲೆ ನಿರಂತರವಾಗಿ ಒತ್ತಡ ಹೇರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ಮರಳಿದ ನಂತರ ನಿಗಮಮಂಡಳಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ತನ್ನ ಪಾಲಿನ ನೇಮಕಾತಿಗಳನ್ನು ಈಗಾಗಲೇ ಪೂರ್ಣಗೊಳಿಸಿದೆ. ಜೆಡಿಎಸ್ 10 ನಿಗಮ ಮಂಡಳಿ,3 ಸಂಸದೀಯ ಕಾರ್ಯದರ್ಶಿಗಳ ಹುದ್ದೆಗಳನ್ನು ನೇಮಕ ಮಾಡುವ ಅವಕಾಶವಿದೆ.

ಜೆಡಿಎಸ್ ಶಾಸಕರು ಹಾಗೂ ಮುಖಂಡರಿಗೆ ನೇಮಕಾತಿ ಮಾಡುವ ಮೂಲಕ ಶಿವರಾತ್ರಿ ಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಶಾಸಕರಾದ ಗೋಪಾಲಯ್ಯ, ಡಾ.ಕೆ.ಅನ್ನದಾನಿ, ಡಾ.ಶ್ರೀನಿವಾಸಮೂರ್ತಿ, ನಾರಾಯಣಗೌಡ, ದೇವಾನಂದ ಚೌಹಾಣ್, ಗೌರಿಶಂಕರ್, ಶ್ರೀನಿವಾಸ್, ಶ್ರೀನಿವಾಸ್‍ಗೌಡ, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚೌಡಾರೆಡ್ಡಿ ತೂಪಲ್ಲಿ, ಬಿ.ಎಂ.ಫಾರೂಖ್, ಭೋಜೇಗೌಡ, ಟಿ.ಎ.ಶರವಣ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಯಾರ್ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋತಿರುವ ಪಕ್ಷದ ಮುಖಂಡರಿಗೂ ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ