ಮುಖ್ಯಮಂತ್ರಿಗಳ ಬರುವಿಕೆ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳು: ಬಿಜೆಪಿ ಶಾಸಕ ನಾಗೇಂದ್ರ ಆರೋಪ

ಮೈಸೂರು, ಫೆ.19-ನಗರಕ್ಕೆ ಮುಖ್ಯಮಂತ್ರಿಗಳು ಬರುವ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಆರೋಪಿಸಿದ್ದಾರೆ.

ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ದೇವರಾಜ ಮಾರುಕಟ್ಟೆ ವೀಕ್ಷಿಸಿ ತೆರಳಿದ ನಂತರ ಮಾರುಕಟ್ಟೆಗೆ ಆಗಮಿಸಿದ ನಾಗೇಂದ್ರ ಸಿಎಂ ಬರೋದನ್ನು ಮೊದಲೇ ಹೇಳಕ್ಕಾಗಲ್ವ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಮುಖ್ಯಮಂತ್ರಿಗಳು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ.ಆದರೆ, ಅಧಿಕಾರಿಗಳು ನನಗೇ ಈ ಬಗ್ಗೆ ಮಾಹಿತಿ ನೀಡಿಲ್ಲ. ಮೇಯರ್ ಅವರಿಗೂ ವಿಷಯ ತಿಳಿದಿಲ್ಲ. ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಅವರು ನಿನ್ನೆಯಷ್ಟೆ ಅಧಿಕಾರ ವಹಿಸಿಕೊಂಡಿದ್ದಾರೆ.ಅವರಿಗೂ ಸೂಕ್ತ ಮಾಹಿತಿ ಇಲ್ಲ. ಈ ಅಧಿಕಾರಿಗಳು ತಾವು ಆಡಿದ್ದೇ ಆಟ ಆಗಿ ಬಿಟ್ಟಿದೆ. ಪ್ರತಿಬಾರಿಯೂ ಹೀಗೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯವನ್ನು ಕುಮಾರಸ್ವಾಮಿ ಅವರ ಗಮನಕ್ಕೂ ತರುತ್ತೇನೆ. ಅಧಿಕಾರಿಗಳಿಗೆ ಬುದ್ಧಿ ಹೇಳುವಂತೆ ಮನವಿ ಮಾಡುತ್ತೇವೆ ಎಂದು ನಾಗೇಂದ್ರ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ