ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕೃತವಾಗಿದೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೈತ್ರಿ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲೇ ವಿಧಾನಸಭಾ ಚುನಾವಣೆಯ ಮಾತುಕತೆ ನಡೆದು ಸೀಟ್ ಹಂಚಿಕೆಯಾಗಿದೆ.
ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಹಾಗೂ ಶಿವಸೇನೆ 23ರಲ್ಲಿ ಸ್ಪರ್ಧೆ ನಡೆಸಲಿವೆ. 2019ರ ವಿಧಾನಸಭಾ ಚುನಾವಣೆಯ 288 ಕ್ಷೇತ್ರಗಳ ಪೈಕಿ ಬಿಜೆಪಿ 145 ಹಾಗೂ ಶಿವಸೇನೆ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಹಾಗೂ ಶಿವಸೇನೆ ಕಳೆದ ಮೂರು ದಶಕಗಳಿಂದ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಸಂಚಿಕೆಯಲ್ಲಿ ಉಂಟಾದ ಭಿನ್ನಮತದಿಂದಾಗಿ ಎರಡು ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದವು. ಇದರಿಂದಾಗಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು 123 ಸ್ಥಾನ ಗೆದ್ದರೆ, ಶಿವಸೇನೆ ಕೇವಲ 63 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಹೈಕಮಾಂಡ್ ಬಿಜೆಪಿ, ಶಿವಸೇನೆ ಮೈತ್ರಿಗೆ ಅನುಮತಿ ನೀಡಿತ್ತು.
ಪ್ರಧಾನಿ ಮೋದಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಶಿವಸೇನೆ ನಾಯಕರು ಕೆಲವು ತಿಂಗಳುಗಳಿಂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಲೋಕಸಭೆ ಚುನಾವಣೆಯನ್ನು ಶಿವಸೇನೆ ಜೊತೆಗೆ ಎದುರಿಸುತ್ತೇವೆ ಎಂದು ಹೇಳುತ್ತಿದ್ದರು.
Lok Sabha polls 2019, BJP-Shiv Sena,seat sharing