ಬೆಂಗಳೂರು,ಫೆ.17- ರೈತ ಪ್ರತಿನಿಧಿಗಳ ದೃಷ್ಟಿಕೋನ ಶಿಬಿರವನ್ನು ನಾಳೆ ನಡೆಯಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕಿಸಾನ್ ಘಟಕ ನಡೆದು ಬಂದ ಹಾದಿಯ ಬಗ್ಗೆ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ತಿಳಿಸಿದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಕಿಸಾನ್ ಘಟಕದ ಅಧ್ಯಕ್ಷ ನಾನಾಪಟೋಲೆ ಶಿಬಿರ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶಿಬಿರ ನಡೆಯಲಿದ್ದು, ಹಲವು ನಿರ್ಣಯವನ್ನು ಕೈಗೊಳ್ಳಲಾಗುತ್ತದೆ.ರಾಜ್ಯದಲ್ಲಿ 56 ಸಾವಿರ ಬೂತ್‍ಗಳಿದ್ದು 5,52,000 ಉಪಹಳ್ಳಿಗಳಿವೆ. ಉಪಹಳ್ಳಿಗಳ ಕಿಸಾನ್ ಘಟಕದ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯೂ ನಡೆಯಲಿದೆ. ಕಿಸಾನ್ ಗರ್ ಪೇ ಚರ್ಚೆ ಕಾರ್ಯಕ್ರಮಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ 2500 ರೈತ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಸಾವಿರಾರು ಕೋಟಿ ರೂ.ಲೂಟಿಯಾಗಿದೆ. ವಿಮಾ ಕಂಪನಿ ಇದರ ಲಾಭವನ್ನು ಪಡೆದುಕೊಂಡಿದೆ.ಈ ಯೋಜನೆಯಲ್ಲಿ ರೈತರಿಗೆ ಕೇವಲ 300 ಕೋಟಿ ವಿಮೆ ಮಾತ್ರ ನೀಡಲಾಗಿದೆ ಎಂದು ಟೀಕಿಸಿದರು.
ಮಹಿಳೆಯರು ತಮ್ಮ ಒಡವೆಗಳನ್ನು ಫೈನಾನ್ಸ್ ಕಂಪನಿಗಳಲ್ಲಿ ಇಟ್ಟಿದ್ದು, ಅವುಗಳನ್ನು ವಾಪಸ್ ಕೊಡಿಸಬೇಕು ಎಂಬ ನಿರ್ಣಯ ಮಂಡಿಸುತ್ತೇವೆ. ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದು ಏಜೆನ್ಸಿ ಮೂಲಕ ಕೊಳವೆ ಬಾವಿಗಳನ್ನು ಕೊರೆಸಬೇಕು. ಒಂದು ವೇಳೆ ವಿಫಲವಾದರೆ ಸರ್ಕಾರವೇ ಹಣ ಭರಿಸಬೇಕೆಂಬ ನಿರ್ಣಯವನ್ನು ಶಿಬಿರದಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.