ಬೆಂಗಳೂರು, ಫೆ.17- ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಆಪರೇಷನ್ ಕಮಲದ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎಂಬಂತಿದ್ದರೂ ಅತೃಪ್ತರ ಕಾಟ ಕಾಂಗ್ರೆಸ್ಗೆ ತಪ್ಪಿದಂತಿಲ್ಲ.
ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಪಕ್ಷದ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಯಾವ ಪಕ್ಷದಿಂದಾದರೂ ನನಗೆ ಟಿಕೆಟ್ ಸಿಕ್ಕರೆ ಸ್ಪರ್ಧೆ ಖಚಿತ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಲಂಬಾಣಿ ಸಮುದಾಯದಿಂದ ಒಬ್ಬರು ಸಂಸದರಾಗಬೇಕೆಂಬುದು ನಮ್ಮ ಸಮುದಾಯದ ಮುಖಂಡರ ಆಗ್ರಹವಾಗಿದೆ. ಹೀಗಾಗಿ ಯಾವುದೇ ಪಕ್ಷದಿಂದಾದರೂ ನಾನು ಸ್ಪರ್ಧೆಗೆ ತಯಾರಿದ್ದೇನೆ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧೆಗಿಳಿಯುವ ಮುನ್ಸೂಚನೆ ನೀಡಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಸಮಾವೇಶವಿದ್ದು, ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿರುವ ಈ ಸಂದರ್ಭದಲ್ಲಿಯೇ ಜಾಧವ್ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಬಿಜೆಪಿಯಿಂದ ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಯಾರ ಕೈಗೂ ಸಿಗದೆ ಇದ್ದ ಶಾಸಕ ಜಾಧವ್ ಅವರು ವಿಪ್ ಜಾರಿಯಾದ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನಕ್ಕೆ ಹಾಜರಾಗಿ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೆ ಈಗ ಹೊಸ ವರಸೆ ಶುರುವಿಟ್ಟುಕೊಂಡಿದ್ದಾರೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಉಸಿರು ಗಟ್ಟಿದ ವಾತಾವರಣವಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಇಲ್ಲಿನ ಜನರೊಂದಿಗೆ ಚರ್ಚಿಸಿ ಮುಂದಿನ ವಾರದೊಳಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳುವ ಮೂಲಕ ಕಾಂಗ್ರೆಸ್ಗೆ ಶಾಕ್ ನೀಡಿದ್ದಾರೆ.
ನಮಗೆ ಪಕ್ಷ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಭೆಗೆ ಮತ್ತು ಸದನಕ್ಕೆ ಹಾಜರಾಗಿದ್ದೆವು. ಹಾಗೆಂದ ಮಾತ್ರಕ್ಕೆ ನಮ್ಮ ಅಸಮಾಧಾನ ಬಗೆಹರಿದಿಲ್ಲ.
ನಮ್ಮ ಕ್ಷೇತ್ರಾಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ನಾವು ಅಂದುಕೊಂಡಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಲ್ಲಿ ಅತೃಪ್ತರೊಂದಿಗೆ ಸೇರಿದ್ದ ಉಮೇಶ್ ಜಾಧವ್ ಅವರು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿಪ್ ನೀಡಿದ ಹಿನ್ನೆಲೆಯಲ್ಲಿ ಅನರ್ಹತೆಯಿಂದ ಪಾರಾಗಲು ಸಭೆಗೆ ಹಾಜರಾಗಿದ್ದರು.ಈಗ ಲೋಕಸಭೆ ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಆದರೆ, ಅವರ ವಿರುದ್ಧ ಪಕ್ಷ ನೀಡಿರುವ ಶೋಕಾಸ್ ನೋಟಿಸ್ ಇನ್ನೂ ಸ್ಪೀಕರ್ ಮುಂದೆ ಇದೆ.ಅವರೇನಾದರೂ ಕ್ರಮ ಕೈಗೊಂಡರೆ ಚುನಾವಣೆಗೆ ನಿಲ್ಲಲು ತೊಂದರೆ ಕೂಡ ಆಗುತ್ತದೆ.ಮುಂದೇನಾಗುತ್ತದೆಯೋ ಕಾದು ನೋಡಬೇಕು.