ಯೋಧರಿಗೆ ನಮನ ಸಲ್ಲಿಸಲು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕಿತ್ತು: ಹೈಕೋರ್ಟ್ ವಕೀಲ ಆರ್.ಪೂರ್ಣಚಂದ್ರ

ಬೆಂಗಳೂರು, ಫೆ.17-ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಿ 7 ದಿನಗಳ ಶೋಕಾಚರಣೆ ಮಾಡಿ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ವಕೀಲ ಆರ್.ಪೂರ್ಣಚಂದ್ರ ಹೇಳಿದ್ದಾರೆ.

ರಾಜಕೀಯ ನಾಯಕರು ದಿವಂಗತರಾದರೆ ನಮ್ಮ ರಾಷ್ಟ್ರ ಧ್ವಜವನ್ನು ಸರ್ಕಾರಿ ಕಟ್ಟಡಗಳ ಮೇಲೆ ಅರ್ಧಕ್ಕೆ ಹಾರಿಸಲಾಗುತ್ತದೆ. ರಜೆಯನ್ನೂ ಘೋಷಿಸಲಾಗುತ್ತದೆ. 3 ಅಥವಾ 7 ದಿನಗಳ ಕಾಲ ಶೋಕವನ್ನು ಆಚರಿಸಿ ಸರ್ಕಾರಿ ಕಾರ್ಯಕ್ರಮ ರದ್ದುಗೊಳಿಸುತ್ತಾರೆ.ಆದರೆ ಸಿಆರ್‍ಪಿಎಫ್‍ನ 44 ಯೋಧರು ಹುತಾತ್ಮರಾಗಿದ್ದಾರೆ. ಇವರಿಗೂ ಕೂಡ ನಮನ ಸಲ್ಲಿಸಲು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕಿತ್ತು.ಆದರೆ ಹಾಗೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಷ್ಟ್ರವನ್ನು ರಕ್ಷಿಸುವವರು ಯೋಧರು.ಬೆಲೆ ಕಟ್ಟಲಾಗದ ದೇಹವನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ.ಭಯೋತ್ಪಾದಕರು ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಕೊಂದಿದ್ದಾರೆ.ಯೋಧರುಗಳಿಂದಲೇ ಪ್ರಜೆಗಳು, ನಾಯಕರು ನಿಶ್ಚಿಂತೆಯಿಂದ ಜೀವಿಸುತ್ತಿರುವುದು.ಆದರೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಯೋಚನೆಯನ್ನೇ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಪೂರ್ಣಚಂದ್ರ ತಿಳಿಸಿದ್ದಾರೆ.

ಸಿಆರ್‍ಪಿಎಫ್‍ನ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಅರ್ಧಕ್ಕೆ ಹಾರಿಸಬೇಕು, 7 ದಿನಗಳ ಶೋಕಾಚರಣೆ ಮಾಡಬೇಕು, ರಾಷ್ಟ್ರದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂಬುದರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಮಂತ್ರಿ ರಾಜ್‍ನಾಥ್‍ಸಿಂಗ್, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಚಿವರಾದ ಅರುಣ್ ಜೇಟ್ಲಿ, ಪಿಯೂಷ್‍ಗೋಯಲ್, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರುಗಳಿಗೆ ಫೆ.15ರಂದು ಟ್ವೀಟರ್ ಮತ್ತು ಫೇಸ್‍ಬುಕ್ ಮೂಲಕ ಮನವಿ ಮಾಡಿದ್ದೆವು.

ಈ ಬಗ್ಗೆ ಕೇಂದ್ರ ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಂಡು ಎಲ್ಲಾ ರಾಜ್ಯಗಳಿಗೂ ಆದೇಶ ಮಾಡಬೇಕು ಮತ್ತು ಹುತಾತ್ಮರಿಗೆ ನಮನ ಸಲ್ಲಿಸಬೇಕು ಎಂದು ಟ್ಯಾಕ್ಸ್ ಅಂಡ್ ಡ್ಯೂಟಿಸ್ ಪೇಯರ್ಸ್ ಕನ್‍ಸೋರ್‍ಶಿಯಮ್ ಆಫ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷರೂ ಆದ ವಕೀಲ ಆರ್.ಪೂರ್ಣಚಂದ್ರ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ