ಬೆಂಗಳೂರು, ಫೆ.16- ವೀರಯೋಧ ಗುರು ಸ್ವಗ್ರಾಮ ಗುಡಿಗೆರೆಯಲ್ಲಿ ಕಣ್ಣೀರ ಧಾರೆ… ಯೋಧನ ಪಾರ್ಥಿವ ಶರೀರ ಬರುತ್ತಿದ್ದಂತೆ ಆಕ್ರಂಧನ ಮುಗಿಲು ಮುಟ್ಟಿತು… ಅವರ ತಂದೆ-ತಾಯಿ, ಮಡದಿಯ ರೋಧನ ಹೇಳತೀರದಾಗಿತ್ತು.ಅಂತಿಮ ದರ್ಶನ ಪಡೆಯಲು ಜನಸಾಗರವೇ ಸೇರಿತ್ತು.
ಯೋಧರು ಪಾರ್ಥೀವ ಶರೀರದ ಪೆಟ್ಟಿಗೆಯನ್ನು ಇಳಿಸುತ್ತಿದ್ದಂತೆ ಗ್ರಾಮಸ್ಥರೆಲ್ಲ ಹುತಾತ್ಮ ಯೋಧ ಗುರು ಅವರ ಅಂತಿಮ ದರ್ಶನ ಮಾಡಲು ಮುಗಿಬಿದ್ದರು.
ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ವೀರಯೋಧನ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ತಂದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಸದಾನಂದಗೌಡ ಅವರು ಬರಮಾಡಿಕೊಂಡರು.ನಂತರ ರಸ್ತೆ ಮಾರ್ಗವಾಗಿ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಾದ ಕೆಎಂ ದೊಡ್ಡಿಯ ಗುಡಿಗೇರಿ ಕಾಲೋನಿಗೆ ಕೊಂಡೊಯ್ಯಲಾಯಿತು.ಮದ್ದೂರು, ಮಳವಳ್ಳಿ ದಾರಿಯುದ್ದಕ್ಕೂ ಯೋಧನಿಗೆ ನಮನ ಸಲ್ಲಿಸುವ ಪೋಸ್ಟರ್‍ಗಳನ್ನು ಹಾಕಲಾಗಿತ್ತು.
ಹುತಾತ್ಮ ಯೋಧನ ಗೌರವಾರ್ಥ ಗುಡಿಗೇರಿ ಕಾಲೋನಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಮೃತ ಯೋಧನ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಬರಮಾಡಿಕೊಂಡು ಅಂತಿಮ ಗೌರವ ಸಲ್ಲಿಸಿ ನಂತರ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು.
ನೆರೆದಿದ್ದವರೆಲ್ಲ ಗುರು ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದರು.ಅನಾವಶ್ಯಕವಾಗಿ ಬಲಿಯಾದ ವೀರಯೋಧನ ತ್ಯಾಗಕ್ಕೆ ಅಲ್ಲಿದ್ದವರ ಆಕ್ರೋಶ, ಆಕ್ರಂಧನ ಮುಗಿಲು ಮುಟ್ಟಿತ್ತು.
ಹುತಾತ್ಮರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು ಎಂದು ತಮ್ಮ ಕ್ರೋಧ ವ್ಯಕ್ತಪಡಿಸುತ್ತಿದ್ದರು. ಇತ್ತ ಗುರು ಅವರ ತಂದೆ-ತಾಯಿ, ಅಣ್ಣ-ತಮ್ಮ, ಮಡದಿ ಅವರನ್ನು ಕುಟುಂಬಸ್ಥರು, ಸ್ನೇಹಿತರು ಸಂತೈಸುತ್ತಿದ್ದುದು ಕಂಡುಬಂತು.
ಶಾಲಾ ಮಕ್ಕಳು, ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿರುವ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವ ಪುಟ್ಟರಾಜು, ಸ್ಥಳೀಯ ಶಾಸಕರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.