ಬೆಂಗಳೂರು, ಫೆ.16-ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಗರ್ ಹುಕುಂ ಸಾಗುವಳಿ ಭೂಮಿ ಸಕ್ರಮ ಹಾಗೂ ವಸತಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಇತ್ಯರ್ಥಗೊಳಿಸುವಂತೆ ಫೆ.19 ರಂದು ಮುಖ್ಯಮಂತ್ರಿ ಗೃಹ ಕಚೇರಿ ಮುಂದೆ ಬೃಹತ್ ಸಾಮೂಹಿಕ ಧರಣಿ ಮತ್ತು ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ಬಗರ್ಹುಕುಂ ಸಾಗುವಳಿ ಭೂಮಿ ಸಕ್ರಮಕ್ಕಾಗಿ ಬಿಡುಗಡೆ ಮಾಡಿರುವ ಫಾರಂ ನಂ.57 ಸ್ವೀಕಾರಕ್ಕೆ ಸಂಬಂಧಪಟ್ಟ ಗೊಂದಲ ನಿವಾರಣೆ, ನಗರ ವ್ಯಾಪ್ತಿ ಮತ್ತು ಕೃಷಿಗೆ ಒಳಪಟ್ಟಿರುವ ಅರಣ್ಯಭಾಗಕ್ಕೆ ಸೇರಿದೆ ಎನ್ನಲಾಗುತ್ತಿರುವ ಬಗರ್ಹುಕುಂ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಆಗ್ರಹಿಸಿದರು.
ಬಡವರಿಗೆ ವಸತಿ ಎಂಬ ಸರ್ಕಾರದ ಘೋಷಣೆಯಂತೆ ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿರುವ ಜಿ+14 ನಂತಹ ವಸತಿ ಯೋಜನೆಯನ್ನು ಇತರೆ ನಗರಗಳಿಗೂ ವಿಸ್ತರಿಸಬೇಕು. ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಿ ಬಡವರಿಗೆ ಮನೆ ನಿವೇಶನಗಳನ್ನು ನೀಡಲು ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು. ನಿವೇಶನಕ್ಕಾಗಿ ಬಿಡಿಎ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಭೂ ಸ್ವಾಧೀನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಅಂದು ನಗರದ ರೈಲ್ವೆ ನಿಲ್ದಾಣದಿಂದ ರ್ಯಾಲಿ ಹೊರಟು ನಂತರ ಮುಖ್ಯಮಂತ್ರಿ ಗೃಹ ಕಚೇರಿ ಎದುರು ಸಾಮೂಹಿಕ ಧರಣಿ ನಡೆಸಲಾಗುವುದು ಎಂದು ಹೇಳಿದರು.