ನವದೆಹಲಿ, ಫೆ.16- ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ ವ್ಯಕ್ತಪಡಿಸಿದೆ.
ಪಾಕಿಸ್ತಾನ ಮೂಲ ನೆಲೆಯಾಗಿರುವ ಜೈಷ್-ಇ-ಮೊಹಮ್ಮದ್ ಸೇರಿದಂತೆ ಇನ್ನಿತರ ಉಗ್ರರ ಸಂಘಟನೆಗಳ ವಿರುದ್ಧ ಜಂಟಿ ಕಾರ್ಯಾಚರಣೆಗೆ ಕೈಜೋಡಿಸುವುದಾಗಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೊಲ್ಟಾನ್, ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರಿಗೆ ಹೇಳಿದ್ದಾರೆ.
ಜಾನ್ಬೋಲ್ಟಾನ್ ಹಾಗೂ ಅಜಿತ್ ದೋವಾಲ್ ದೂರವಾಣಿ ಸಂಭಾಷಣೆ ನಡೆಸಿದ್ದು, ವಿಶ್ವಸಂಸ್ಥೆಯ ನಿರ್ಣಯಗಳ ಅಡಿಯಲ್ಲಿ ಪಾಕಿಸ್ತಾನವನ್ನು ನಿಯಂತ್ರಿಸಲು ನಿರ್ಧರಿಸಿದ್ದು, ಜೈಷ್-ಇ- ಮೊಹಮ್ಮದ್ ಸಂಘಟನೆ ಮುಖಂಡ ಮಸೂದ್ ಅಝಾರ್ ನನ್ನು ಜಾಗತಿಕ ಭಯೋತ್ಪಾದಕರನ್ನಾಗಿ ನೇಮಿಸಲು ಇರುವ ಎಲ್ಲ ಅಡೆತಡೆಗಳನ್ನು ತೆಗೆದು ಹಾಕುವ ಸಂಬಂಧ ಮಾತುಕತೆ ನಡೆಸಲಾಯಿತು ಎಂದು ಅಜಿತ್ ದೋವಾಲ್ ತಿಳಿಸಿದ್ದಾರೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಹುತಾತ್ಮರಾದ ಯೋಧರಿಗೆ ಅಮೆರಿಕಾ ಸಂತಾಪ ಸೂಚಿಸಿದ್ದು, ಗಡಿಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ ನೀಡಲಿದ್ದು, ಉಗ್ರರನ್ನು ಮಟ್ಟ ಹಾಕಿ ದಾಳಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಜಿತ್ ದೋವಲï ಅವರಿಗೆ ತಿಳಿಸಿರುವುದಾಗಿ ಬೋಲ್ಟಾನ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಉಗ್ರರ ಚಟುವಟಿಕೆಗಳಿಗೆ ಪಾಕಿಸ್ತಾನ ಮೂಲ ನೆಲೆಯಾಗುತ್ತಿರುವ ವಿರುದ್ಧ ಹೋರಾಟ ನಡೆಸಲಾಗುವುದು ಈ ಸಂಬಂಧ ಮಾತುಕತೆಯನ್ನು ಮುಂದುವರೆಸಲಾಗುವುದು ಎಂದು ಬೋಲ್ಟಾನ್ ತಿಳಿಸಿದ್ದಾರೆ.
ಈ ಹಿಂದೆ ಶ್ವೇತ ಭವನ ಹಾಗೂ ಸೆಕ್ರೆಟರಿ ಅಪ್ ಸ್ಟೇಟ್ ಮೈಕ್ ಪೊಂಪೆಯೊ ಕೂಡಾ ಉಗ್ರ ಚಟುವಟಿಕೆಗಳಿಗೆ ನೀಡುತ್ತಿರುವ ಬೆಂಬಲ ರದ್ದುಗೊಳಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.