ಮಂಡ್ಯ, ಫೆ.15- ಮಂಡ್ಯಜಿಲ್ಲೆ ಮದ್ದೂರು ತಾಲೂಕಿನ ಗುಡಿಗೇರಿ ಗ್ರಾಮದಲ್ಲೀಗ ನೀರವ ಮೌನ. ತಾಯ್ನಾಡಿನ ಸೇವೆಗಾಗಿ ತೆರಳಿದ್ದ ಎಚ್.ಗುರು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಪಾರ್ಥಿವ ಶರೀರವಾಗಿ ಹಿಂದಿರುಗುತ್ತಿರುವುದು ನೆನೆದುಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ.
ವೀರಯೋಧನತ್ಯಾಗ, ಬಲಿದಾನ, ಶೌರ್ಯ ಒಂದೆಡೆಯಾದರೆ ಮಗನನ್ನು ಕಳೆದುಕೊಂಡು ರೋಧಿಸುತ್ತಿರುವ ತಂದೆ-ತಾಯಿಗಳು, ಕುಟುಂಬಸ್ಥರ ದುಃಖ ಮತ್ತೊಂದೆಡೆ. ಗ್ರಾಮಸ್ಥರ ನೋವು ಇನ್ನೊಂದೆಡೆ.
ಮೃತಪಟ್ಟ ಯೋಧರ ಪೈಕಿ ಗುಡಿಗೇರಿ ಗ್ರಾಮದ ಗುರುಕೂಡ ಹುತಾತ್ಮನಾಗಿರುವ ಯೋಧ.ಕೆಎಂ ದೊಡ್ಡಿ ಸಮೀಪದ ಗುಡಿಗೇರಿ ಗ್ರಾಮದ ಹೊನ್ನಯ್ಯ ಎಂಬುವವರ ಪುತ್ರ ಕಳೆದ ಕೆಲವು ವರ್ಷಗಳಿಂದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಕಳೆದ ಹತ್ತು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು.ರಜೆ ಮೇಲೆ ಊರಿಗೆ ಬಂದಿದ್ದ ಗುರು ಒಂದು ವಾರ ಊರಿನಲ್ಲಿದ್ದರು.
ನಿನ್ನೆ ಯಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದ ಇವರು ಜಾರ್ಖಂಡ್ನಲ್ಲಿ 94ನೆ ಬೆಟಾಲಿಯನ್ನಲ್ಲಿ, ಶ್ರೀನಗರದಲ್ಲಿ 84ನೆ ಬೆಟಾಲಿಯನ್ನಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಸಿಆರ್ಪಿಎಫ್ಗೆ ಸೇರ್ಪಡೆ ಯಾಗಿದ್ದಗುರು ಸ್ವಂತ ಸೋದರ ಮಾವನ ಮಗಳನ್ನು ಮದುವೆಯಾಗಿ 10 ತಿಂಗಳಾಗಿದೆ.
ಇತ್ತೀಚೆಗಷ್ಟೆ ಹೊಸ ಮನೆ ಕಟ್ಟಿದ್ದರು.ಗೃಹ ಪ್ರವೇಶವಾಗಿ ಸುಮಾರು ಒಂದು ವರ್ಷವಾಗಿತ್ತು.ಗೃಹ ಪ್ರವೇಶದ ನಂತರಗುರು ಮದುವೆ ಮಾಡಿಕೊಂಡಿದ್ದರು. ಅವರತಂದೆ-ತಾಯಿ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದರು.ಮನೆಯಲ್ಲಿ ಅಪ್ಪ-ಅಮ್ಮ, ತಮ್ಮಂದಿರು ಇದ್ದಾರೆ.ಗುರುವಿನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ಅವರು ಭಾವಚಿತ್ರದ ಮುಂದೆ ನಿಂತು ಗೋಳಾಡುತ್ತಿದ್ದ ದೃಶ್ಯಎಂಥವರ ಕರುಳು ಕೂಡಕಿತ್ತುಬರುವಂತಿತ್ತು.
ಸೆಲ್ಫಿ ವಿಡಿಯೋ: ಕೆಲವೇ ದಿನಗಳ ಹಿಂದೆ ಜಮ್ಮುವಿನಿಂದ ಸೆಲ್ಫಿ ವಿಡಿಯೋ ಮಾಡಿ ಗುರು ತಮ್ಮ ಕುಟುಂಬದವರಿಗೆ ಕಳುಹಿಸಿದ್ದರು. ಸ್ನೋ ಬೀಳುವ ಪ್ರದೇಶದಲ್ಲಿ ನಿಂತು ಹಾಯ್ ಮಾಡುತ್ತಿರುವ ವಿಡಿಯೋವನ್ನು ವಾಟ್ಸಾಪ್ನಲ್ಲಿ ಕಳುಹಿಸಿದ್ದರು.ಗುರು ಕಳುಹಿಸಿದ ಅದೇ ವಿಡಿಯೋ ನೋಡುತ್ತಾ ಅವರ ಕುಟುಂಬದವರು, ಗೆಳೆಯರು ಕಣ್ಣೀರು ಹಾಕುತ್ತಿದ್ದದೃಶ್ಯ ಕರುಳು ಹಿಂಡುವಂತಿತ್ತು.
ಅಂತ್ಯಕ್ರಿಯೆಗೆ ಸಿದ್ಧತೆ: ವೀರ ಯೋಧನ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುಡಿಗೇರಿ ಗ್ರಾಮದಲ್ಲಿ ಅಂತ್ಯಕ್ರಿಯೆಗಾಗಿ ಜಾಗವನ್ ನುಜಿಲ್ಲಾಧಿಕಾರಿ ಮಂಜುಶ್ರೀ ಅವರು ಪರಿಶೀಲನೆ ನಡೆಸಿದ್ದಾರೆ. ಅಂತ್ಯಕ್ರಿಯೆ ಮಾಡಲು ಅವರ ಕುಟುಂಬದವರ ಜಮೀನಿಲ್ಲದಕಾರಣ ಜಿಲ್ಲಾಡಳಿತದಿಂದಲೇ ಜಾಗ ಮಂಜೂರು ಮಾಡಲಾಗುವುದು ಎಂದುಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇಂದು ಗುರು ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಮಂಜುಶ್ರೀ ಅವರು, ಅಂತ್ಯಕ್ರಿಯೆಗೆ ಈಗಾಗಲೇ ಜಾಗ ಅಂತಿಮ ಗೊಳಿಸಲಾಗಿದೆ ಎಂದು ಹೇಳಿದರು.