ಪುಲ್ವಾಮಾ ದಾಳಿ: ಮೋದಿ ನೇತೃತ್ವದಲ್ಲಿ ಇಂದು ಭದ್ರತಾ ಸಭೆ; ಉಗ್ರರಿಗೆ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚೆ!

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತಾ ಪಡೆ ಸಭೆ ನಡೆಯಲಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಗುಪ್ತಚರ ದಳದ ಮುಖ್ಯಸ್ಥರು ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಸಿಆರ್ಪಿಎಫ್ ಯೋಧರ ಮೇಲೆ ನಿನ್ನೆ(ಗುರುವಾರ) ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ಧಾರೆ. ಕೆಲಸದ ನಿಮಿತ್ತ ವಾಹನವೊಂದರಲ್ಲಿ ತೆರಳುತ್ತಿದ್ದ ಕರ್ತವ್ಯನಿರತ ಯೋಧರ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ದಿಢೀರ್ ಆಕ್ರಮಣ ನಡೆಸಿದೆ. ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಇನ್ನು ಭಾರತ ಯೋಧರ ಮೇಲೆ ಜೈಷೆ-ಮೊಹಮ್ಮದ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ನಮ್ಮ ಯೋಧರನ್ನು ಬಲಿ ಪಡೆದಿರುವ ಉಗ್ರರ ವಿರುದ್ಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರೆಲ್ಲಾ ತಮ್ಮದೇ ರೀತಿಯಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತೀಯರ ರಕ್ತ ಕುದಿಯುತ್ತಿದೆ. ಭಯೋತ್ಪಾದಕರ ಈ ಹೇಡಿತನದ ಕೃತ್ಯ ಇದಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಕಿಡಿಕಾರಿದ್ಧಾರೆ.

ಹಾಗೆಯೇ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದರು. ‘ನಮ್ಮ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಜತೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ಉಗ್ರರ ದಾಳಿ ಹೊಣೆ ಜೈಷ್-ಇ-ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ. ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ಧೋವಲ್ ಅಧಿಕಾರಿಗಳ ಸಭೆ ನಡೆಸುತ್ತೇನೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದರು ಪ್ರಧಾನಿ ನರೇಂದ್ರ ಮೋದಿಯವರು.

ಹುತಾತ್ಮ ಯೋಧರು ದೇಶ ಕಾಯುವ ಸೈನಿಕರು. ಸಿಆರ್ಪಿಎಫ್ನವರು ಧೈರ್ಯವಂತ ಹೃದಯಗಳು. ಮೃತ ಹುತಾತ್ಮ ಆತ್ಮಗಳಿಗೆ ಶಾಂತಿ ಸಿಗಲಿ. ಯೋಧರನ್ನು ಬಲಿ ತೆಗೆದುಕೊಂಡ ರಕ್ತದ ಪ್ರತಿ ಹನಿ-ಹನಿಗೂ ನಾವು ಪ್ರತೀಕಾರ ಪಡೆಯುತ್ತೇವೆ ಎಂದು ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ