ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ನಡೆದ ದಾಳಿಗೂ ಎರಡು ದಿನ ಮೊದಲು ಸೂಚನೆ ಸಿಕ್ಕಿತ್ತು ಎನ್ನುವ ವಿಚಾರ ಈಗ ಬಹಿರಂಗಗೊಂಡಿದೆ. ಆಘಾತಕಾರಿ ವಿಚಾರ ಏನೆಂದರೆ, ಒಂದು ವರ್ಷದ ಮೊದಲೇ ಈ ದಾಳಿಗೆ ಸಿದ್ಧತೆ ಆರಂಭಗೊಂಡಿತ್ತಂತೆ.
ಈ ದಾಳಿ ನಡೆಯಲು ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಈ ರೀತಿ ದಾಳಿ ನಡೆಯಬಹುದು ಎಂದು ಎರಡು ದಿನಗಳ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತಂತೆ. ಈ ಬಗ್ಗೆ ಪೊಲೀಸರು ಎಲ್ಲ ಕಡೆಗಳಲ್ಲಿ ಸುತ್ತೋಲೆ ರವಾನೆ ಮಾಡಿದ್ದರು.
ದಾಳಿಯ ಸೂಚನೆ ನೀಡುವಂಥ ವಿಡಿಯೋ ಒಂದು ಟ್ವಿಟ್ಟರ್ನಲ್ಲಿ ಇತ್ತೀಚೆಗೆ ಹರಿದಾಡಿತ್ತು. ಅದರಲ್ಲಿ ಉಗ್ರರು ನಾವು ಹೇಗೆ ದಾಳಿ ನಡೆಸುತ್ತೇವೆ ಎನ್ನುವ ಬಗ್ಗೆ ಹೇಳಿಕೊಂಡಿದ್ದರು. ವಿಡಿಯೋದಲ್ಲಿ ಹೇಳಿದ ಮಾದರಿಯಲ್ಲೇ ನಿನ್ನೆ ದಾಳಿ ನಡೆದಿದೆ. ಅಂದಹಾಗೆ, ಈ ಟ್ವಿಟ್ಟರ್ ಖಾತೆಯನ್ನೂ ಎಲ್ಲರೂ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ, ಯಾವ ಪ್ರದೇಶದಿಂದ ಈ ಖಾತೆಯನ್ನು ಆಪರೇಟ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಭದ್ರತಾ ಸಭೆ ಕರೆಯಲಾಗಿತ್ತು. ಈ ವೇಳೆ ಸಂಭಾವ್ಯ ದಾಳಿ ಕುರಿತು ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೇನಾ ವಾಹನ ಸಂಚರಿಸುವ ದಾರಿಯಲ್ಲಿ ಗ್ರೈನಡ್ ಮತ್ತಿತ್ಯಾದಿ ಸ್ಫೋಟಕಗಳನ್ನು ಇಡಲಾಗಿದೆಯೇ ಎಂದು ಪರೀಕ್ಷೆ ಮಾಡಲಾಗಿತ್ತು.
“ಇಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಮಾತ್ರವಲ್ಲ. ನಮ್ಮ ತಪ್ಪೂ ಇದೆ. ಸ್ಫೋಟಕ ತುಂಬಿದ ವಾಹನಗಳನ್ನು ನಾವು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಾದರೆ, ಇದರಲ್ಲಿ ನಮ್ಮ ತಪ್ಪು ಕೂಡ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು,” ಎಂದು ಜಮ್ಮು-ಕಾಶ್ಮೀರ ಗವರ್ನರ್ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ.
ಈ ದಾಳಿಗೆ ಒಂದು ವರ್ಷದ ಹಿಂದೆ ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಜೈಶ್-ಇ-ಮೊಹ್ಮದ್ ಹಾಗೂ ಲಷ್ಕರ್ ತೊಯ್ಬಾ ಉಗ್ರ ಸಂಘಟನೆಗಳು ಒಟ್ಟಾಗಿ ಈ ದಾಳಿಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ಗುರುವಾರ ಭೀಕರ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ 40 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.
ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್ಪಿಎಫ್ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿ ಜವಾಬ್ದಾರಿ ಹೊತ್ತುಕೊಂಡಿದೆ.