ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ಕರ್ತವ್ಯ ನಿಮಿತ್ತ ತೆರಳುತ್ತಿದ್ದ ಸಿಆರ್ಪಿಎಫ್ ಯೋಧರ ವಾಹನಕ್ಕೆ ಜೈಷ್- ಎ -ಮೊಹಮ್ಮದ್ ಉಗ್ರ ಸಂಘಟನೆ ದಿಢೀರ್ ಆಕ್ರಮಣ ನಡೆಸಿತು. ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆ ಮೇಲೆ ಆತ್ಮಾಹುತಿ ದಾಳಿಗೆ ಮುಂದಾದ 22 ವರ್ಷದ ಯುವಕ ಘಟನಾ ಸ್ಥಳದಿಂದ 10 ಕಿ.ಮೀ ಅಂತರ ದಕ್ಷಿಣ ಕಾಶ್ಮೀರದ ಗುಂಡಿಬಾಗ್ ಗ್ರಾಮದವನು ಎಂದು ಪೊಲೀಸರ ದಾಖಲೆಯಲ್ಲಿ ತಿಳಿದುಬಂದಿದೆ.
ಆದಿಲ್ ಅಹ್ಮದ್ ದಾರ್ (ಉಗ್ರ ಸಂಘಟನೆ ನೀಡಿದ ಹೆಸರು) ಇಲ್ಲಿನ ಸ್ಥಳೀಯ ಶಾಲೆಯಲ್ಲಿ 12ನೇ ತರಗತಿ ಅಭ್ಯಾಸ ಮಾಡುತ್ತಿದ್ದ. 2017ರಲ್ಲಿ ಅರ್ಧಕ್ಕೆ ಶಾಲೆ ತೊರೆದ ಈತ 2018ರಲ್ಲಿ ನಾಪತ್ತೆಯಾಗಿದ್ದ. ಬಳಿಕ ಈತ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ, ಜೈಷ್-ಇ ಮೊಹಮ್ಮದ್ ಮತ್ತು ಹಿಜುಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.
ಕಾಶ್ಮೀರದ ಸ್ಥಳೀಯ ವಾಸಿಯಾಗಿದ್ದ ದಾರ್ ಸೋದರ ಸಂಬಂಧಿ ಕೂಡ ಉಗ್ರನಾಗಿದ್ದು, ಎನ್ಕೌಂಟರ್ನಲ್ಲಿ ಈತ ಸವಾನ್ನಪ್ಪಿದ. ಈ ಘಟನೆ ಬಳಿಕ ಈತ ಕೂಡ ನಾಪತ್ತೆಯಾಗಿದ್ದ. ಪೊಲೀಸರ ವರದಿ ಪ್ರಕಾರ ಈತ ಸಿ ಕ್ಯಾಟಗರಿ ಉಗ್ರನಾಗಿದ್ದ. ಉಗ್ರ ಸಂಘಟನೆಗೆ ಸೇರುವ ಮುನ್ನ ಈತ ಇಲ್ಲಿನ ಸಣ್ಣ ಗಿರಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಬಳಿಕ ಜೈಷ್ ಎ ಮೊಹಮ್ಮದ್ ಸಂಘಟನೆ ಸೇರಿ “ಫಿದಯೆನ್” (ಆತ್ಮಾಹುತಿ ದಾಳಿಕೋರ) ಆಗಿದ್ದನು.
ದಾಳಿಗೂ ಮೊದಲು ಈತ ವಿಡಿಯೋ ಚಿತ್ರೀಕರಣ ಮಾಡಿ, ಬಹುದಿನಗಳಿಂದ ಕಾದಿದ್ದಕ್ಕೆ ತನ್ನ ಸಂಘಟನೆ ಪರ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಕಾಶ್ಮೀರಿ ಜನರಿಗೆ ಕಡೆಯ ಸಂದೇಶ ರವಾನಿಸಿದ್ದಾನೆ.
ಆತ್ಮಾಹುತಿ ದಾಳಿ ಸುದ್ದಿ ಹರಡುತ್ತಿದ್ದಂತೆ ಗುಂಡಿಬಾಗ್ ಮತ್ತು ಸಂಘಟನೆಯವರು ಒಟ್ಟಾಗಿ ದಾರ್ ಅಂತ್ಯಕ್ರಿಯೆ ನಡೆಸಿದ್ದಾರೆ, ಯಾರು ಬಾರದಂತಹ ಜಾಗದಲ್ಲಿ ಅಂತಿಮ ಕ್ರಿಯೆ ಮುಗಿಸಲಾಗಿದೆ.