ಬೆಂಗಳೂರು, ಫೆ.15- ಗುಡಿಗೇರಿ ಗ್ರಾಮದ ವೀರಯೋಧ ಎಚ್.ಗುರು ಐದು ದಿನಗಳ ಹಿಂದಷ್ಟೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.ಕಳೆದ 10 ತಿಂಗಳ ಹಿಂದಷ್ಟೆ ಗುಡಿಗೇರಿ ಕಾಲೋನಿಯ ಕಲಾವತಿ ಅವರನ್ನು ವಿವಾಹವಾಗಿದ್ದರು.ಉಗ್ರರ ದಾಳಿಯಲ್ಲಿ ಯೋಧ ಗುರು ಮೃತಪಟ್ಟ ಸುದ್ದಿ ಇವರ ಮನೆಗೆ ಮುಟ್ಟುತ್ತಿದ್ದಂತೆ ಅವರ ಪತ್ನಿ ತೀವ್ರ ಆಘಾತಕ್ಕೊಳಗಾದರು.
ಅವರು ಕರೆ ಮಾಡಿದ ಸಂದರ್ಭದಲ್ಲಿ ನನಗೆ ಮಾತನಾಡಲು ಆಗಲಿಲ್ಲ. ಆದರೆ, ಈಗ ಮಾತನಾಡೋಣ ಎಂದರೆ ಅವರೇ ಇಲ್ಲ. ನನಗೆ ಅವರು ಬೇಕು ಎಂದು ರೋದಿಸುತ್ತ ವೀರ ಯೋಧನ ಪತ್ನಿ ಅಳುತ್ತಿದ್ದರೆ ಅಲ್ಲಿದ್ದವರ ದುಃಖದ ಕಟ್ಟೆ ಒಡೆದಿತ್ತು.
ವಿಪರ್ಯಾಸವೆಂದರೆ ಯೋಧ ಗುರು ಅವರು ಗುರುವಾರ ಬೆಳಗ್ಗೆ ತಮ್ಮ ಪತ್ನಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಪತ್ನಿ ಮನೆಕೆಲಸದಲ್ಲಿದ್ದ ಕಾರಣ ತನ್ನ ಪತಿಯೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಸಂಜೆ ಕಲಾವತಿ ಅವರು ಮರಳಿ ಪತಿಗೆ ಕರೆ ಮಾಡಿದ ಸಂದರ್ಭದಲ್ಲಿ ಆ ಕಡೆಯಿಂದ ಯಾವುದೇ ಪ್ರತ್ಯುತ್ತರ ಸಿಕ್ಕಿರಲಿಲ್ಲ. ಸಂಜೆ ಹೊತ್ತಿಗೆ ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿಯಾಗಿದೆ ಎಂಬ ಸುದ್ದಿ ಸಿಕ್ಕಿತ್ತು.
ರಾತ್ರಿ ಹೊತ್ತಿಗೆ ಯೋಧ ಗುರು ಹುತಾತ್ಮರಾದರೆಂಬ ಸುದ್ದಿ ಹೊರಬಿತ್ತು. ತಮ್ಮ ಮಗ ಮತ್ತು ಸೊಸೆಗಾಗಿ ಗುರು ಅವರ ತಂದೆ ಹೊಸ ಮನೆಯೊಂದನ್ನು ಕಟ್ಟಿಸಿದ್ದರು. ಇತ್ತೀಚೆಗೆ ಅದರ ಗೃಹ ಪ್ರವೇಶವೂ ನಡೆದಿತ್ತು.ಆದರೆ, ನೂತನ ಮನೆಯಲ್ಲಿ ಸಂಸಾರ ಮಾಡುವ ಆಸೆ ಕೊನೆಗೂ ಈಡೇರಲೇ ಇಲ್ಲ.
ಯೋಧ ಗುರು ರಜೆ ಮುಗಿಸಿ ಫೆ.10ರಂದು ಮರಳಿದ್ದರು ಮತ್ತು ಫೆ.15 ಗುರುವಾರ ಇವರು ಮರಳಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ಉಗ್ರರ ದಾಳಿಗೆ ಪ್ರಾಣಾರ್ಪಣೆ ಮಾಡಬೇಕಾಗಿ ಬಂದಿದ್ದು ದುರ್ವಿಧಿಯೇ ಸರಿ.