![crpf-_650_111915034337](http://kannada.vartamitra.com/wp-content/uploads/2019/02/crpf-_650_111915034337-619x381.jpg)
ಮಂಡ್ಯ, ಫೆ.15-ತೆಗೆದುಕೊಂಡ ಕಾರ್ಯವನ್ನು ಸಾಧಿಸಿಯೇ ತೀರುವ ಛಲ ಹೊಂದಿದ್ದ ಯೋಧ ಗುರು ಎಲ್ಲರಿಗೂ ಅಚ್ಚು ಮೆಚ್ಚಿನ ಗೆಳೆಯನಾಗಿದ್ದ ಎಂದು ಆತನ ಜೊತೆ ಕಾರ್ಯನಿರ್ವಹಿಸಿದ್ದ ಸಿಆರ್ಪಿಎಫ್ನ ಕೆಲ ಯೋಧರು ನೆನೆಪಿಸಿ ಕೊಂಡಿದ್ದಾರೆ.
ಸಿಆರ್ಪಿಎಫ್ಗೆ ಆಯ್ಕೆಯಾದಾಗ ನಾವೆಲ್ಲ ಜೊತೆಗೆ ತರಬೇತಿಗೆ ಹೋಗುತ್ತಿದ್ದೆವು. ಎಲ್ಲದರಲ್ಲೂಆತ ಮೊದಲಿಗನಾಗಿದ್ದ. ಮಂಡ್ಯ ಭಾಷೆಯಲ್ಲೇ ಎಲ್ಲರನ್ನು ಆಕರ್ಷಿಸುತ್ತಿದ್ದಎಂದು ಮೈಸೂರು ಮೂಲದ ಯೋಧ ಮಹದೇವ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುವಾಗ ಯಾವುದಕ್ಕೂ ಅಂಜುತ್ತಿರಲಿಲ್ಲ. ಆತನದನಿಯಲ್ಲೇ ದೇಶಾಭಿಮಾನ ಯಾವಾಗಲೂ ಕೇಳಿ ಬರುತ್ತಿತ್ತು.ಇತರರಿಗೂ ಸ್ಫೂರ್ತಿ ನೀಡುವಂತೆ ಯಾವುದೇ ಕಾರ್ಯಾಚರಣೆ ಇರಲಿ, ಕೆಚ್ಚೆದೆಯಿಂದ ಮುನ್ನುಗ್ಗುತ್ತಿದ್ದ. ನಾನು ಅದನ್ನು ನೋಡಿದ್ದೇನೆ. ಉಗ್ರರು ಉಪಟಳದ ಪ್ರದೇಶಗಳಲ್ಲಿ ಹೇಗೆ ನಾವು ಇರುತ್ತೇವೆ ಎಂಬುದು ನಮಗೇ ಮಾತ್ರ ಗೊತ್ತುಎಂದು ಹೇಳಿದ್ದಾರೆ.
ಕೆಲ ತಿಂಗಳ ಕಾಲ ಆತನೊಂದಿಗೆ ಕಳೆದಿದ್ದೇನೆ. ಏನಾದರೊಂದು ಸಾಧಿಸಬೇಕೆಂಬ ಹಂಬಲ ಅವರಲ್ಲಿತ್ತು. ಆದರೆ ಹೇಳಿದಂತೆಯೇ ತನ್ನ ಪ್ರಾಣವನ್ನು ದೇಶಕ್ಕಾಗಿ ಮುಡುಪಾಗಿಟ್ಟಿದ್ದಾನೆ ಎಂದು ಕಣ್ಣೀರಿಟ್ಟ ಯೋಧ ಮಹದೇವ್, ನಾನು ಕೂಡ ಈಗ ಕೂಡಲೇ ರಜೆ ಮೊಟಕುಗೊಳಿಸಿ ನನ್ನದೇಶ ಸೇವೆಗೆ ಸಜ್ಜಾಗುತ್ತೇನೆ. ಏನಾದರೊಂದು ಆಗಲೇಬೇಕು ಎಂದು ಉದ್ಗರಿಸಿದ್ದಾರೆ.