ಯುಪಿಎಗಿಂತಲೂ ಕಡಿಮೆ ಬೆಲೆಯಲ್ಲಿ ಎನ್​ಡಿಎ ರಫೇಲ್ ಡೀಲ್ ಮಾಡಿತ್ತು; ಸಿಎಜಿ ವರದಿಯಲ್ಲಿ ಮಾಹಿತಿ ಬಹಿರಂಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ರಫೇಲ್​ ಒಪ್ಪಂದದ ಬಗ್ಗೆ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಹಿನ್ನಡೆ ಉಂಟಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಒಪ್ಪಂದಕ್ಕಿಂತ ಎನ್​ಡಿಎ ಮಾಡಿರುವ ಹೊಸ ಡೀಲ್​ ಕಡಿಮೆ ಬೆಲೆಯಲ್ಲಿ ನಡೆದಿದೆ ಎಂದು ಸಿಎಜಿ ವರದಿ ಲೋಕಸಭೆ ಅಧಿವೇಶನದಲ್ಲಿ ಹೇಳಿದೆ.

ರಾಹುಲ್​ ಸೇರಿದಂತೆ ಅನೇಕ ನಾಯಕರು ಸಂಸತ್​ ಎದುರು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ಭಾವಚಿತ್ರ ಇರುವ ಕಾಗದದ ವಿಮಾನಗಳನ್ನು ಹಾರಿ ಬಿಡಲಾಯಿತು. ಇದರ ನಡುವೆಯೇ, ಸಿಎಜಿ ವರದಿಯನ್ನು ಲೋಕಸಭೆಯಲ್ಲಿ ಪ್ರಕಟಮಾಡಲಾಯಿತು. 2007ರಲ್ಲಿ ನಡೆದ ಒಪ್ಪಂದಕ್ಕಿಂತ 2015ರ ಡೀಲ್​ ಶೇ.2.86 ಕಡಿಮೆ ಬೆಲೆಯಲ್ಲಿ ಆಗಿದೆ. ಇದರ ಜೊತೆಗೆ ಬಹುಬೇಗ ಯುದ್ಧವಿಮಾನಗಳು ಲಭ್ಯವಾಗುತ್ತಿವೆ ಎಂದು ಸಿಎಜಿ ವರದಿ ಹೇಳಿದೆ.

ರಫೇಲ್​ ಡೀಲ್​ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್​ ಈ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್​ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ಆದರೆ, ಮೋದಿ ಪರವಾಗಿ ಕೋರ್ಟ್​ ತೀರ್ಪು ನೀಡಿತ್ತು. ಈಗ ಸಿಎಜಿ ವರದಿಯಲ್ಲೂ ಕಾಂಗ್ರೆಸ್​ಗೆ ಮುಖಭಂಗವಾಗಿದೆ.

ಈ ಮೊದಲು ಊಹಿಸಿದಂತೆ ಎಲ್ಲಿಯೂ ರಫೇಲ್​ ಒಪ್ಪಂದದ ಮೊತ್ತವನ್ನು ಸಿಎಜಿ ವರದಿ ಬಹಿರಂಗ ಮಾಡಿಲ್ಲ. ರಫೇಲ್​ ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೊಂಡಿಲ್ಲ ಎನ್ನಲಾಗಿದೆ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ಸಲ್ಲಿಕೆಯಾಗಿದೆ.

ವರದಿಯಲ್ಲಿ ರಫೇಲ್ ಜೆಟ್​ ಒಪ್ಪಂದದ 2007 ಮತ್ತು 2015ರ ಅವಧಿಯ ಬಿಡ್​ಗಳ ಹೋಲಿಕೆ ಮತ್ತು ಪ್ರಕ್ರಿಯೆ, ಕ್ರಮಗಳನ್ನು ಉಲ್ಲೇಖ ಮಾಡಲಾಗಿದೆ. 36 ವಿಮಾನಗಳ ಖರೀದಿಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಯುಪಿಎ ಸರ್ಕಾರ ಅವಧಿಯಲ್ಲಿ 2007ರಲ್ಲಿ 18 ವಿಮಾನಗಳ ಖರೀದಿ ಸಂಬಂಧ ಕರೆದಿದ್ದ ಜಾಗತಿಕ ಟೆಂಡರ್​ ಮಾಹಿತಿ ಹಂಚಿಕೊಳ್ಳಲಾಗಿದೆ. ಇಂದು ಸಿಎಜಿ ಆಗಿರುವ ರಾಜೀವ್ ಮೆಹರಿಷಿ ಅವರು ರಫೇಲ್​ ಒಪ್ಪಂದದ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ