ಐದು ವರ್ಷದಲ್ಲಿ ಒಮ್ಮೆಯೂ ಭೂಕಂಪ ಆಗಲಿಲ್ಲ:  ರಾಹುಲ್ ಗೆ ಮೋದಿ ಟಾಂಗ್

ಹೊಸದಿಲ್ಲಿ: ಕೆಲವರು ಸದನದಲ್ಲಿ ತಾವು ಬಾಯಿಬಿಟ್ಟರೆ ಭೂಕಂಪವಾಗುತ್ತದೆ ಎಂದು ಅಬ್ಬರಿಸುತ್ತಿದ್ದರು. ಆದರೆ ಅವರು ಬೇಕಾದಷ್ಟು ಮಾತಾಡಿದರೂ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೂ ಯಾವ ಭೂಕಂಪವೂ ಆಗಲಿಲ್ಲ… ಮನಪೂರ್ವಕ ಅಪ್ಪುಗೆಯಲ್ಲೂ, ನಾಟಕೀಯ ಅಪ್ಪುಗೆಯಲ್ಲೂ ವ್ಯತ್ಯಾಸವಿರುವುದನ್ನು ನಾನು ಈ ಸದನದಲ್ಲಿ ಕಣ್ಣಾರೆ ಕಂಡಿದ್ದೇನೆ…ಹೀಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೆಸರು ಉಲ್ಲೇಖಿಸದೇ ಅವರ ವಿರುದ್ಧ ಪ್ರಧಾನಿ ಮೋದಿ ವಾಗ್ಬಾಣಗಳನ್ನು ಹರಿಬಿಟ್ಟರು.

ಹಾಲಿ ಲೋಕಸಭೆಯಲ್ಲಿ ಬುಧವಾರ ಕೊನೆಯ ಭಾಷಣ ಮಾಡಿದ ಮೋದಿ ತಮ್ಮ ಸರಕಾರದ ಸಾಧನೆಗಳ ಜತೆಜತೆಗೆ ಕೆಲವು ನಿರ್ಧಾರಗಳು ಹಾಗೂ ವಿಧೇಯಕಗಳ ಮಂಡನೆಯಲ್ಲಿ ಪ್ರತಿಪಕ್ಷಗಳು ನೀಡಿದ ಸಹಕಾರವನ್ನು ಕೊಂಡಾಡಿದರು. ಅದೇ ಓಘದಲ್ಲಿ ರಫೇಲ್‌, ನೋಟು ಅಮಾನ್ಯೀಕರಣದಂತಹ ಸಂಗತಿಗಳನ್ನು ಮುಂದಿಟ್ಟುಕೊಂಡು ಗುಡುಗುತ್ತಿರುವ ಪ್ರತಿಪಕ್ಷಗಳ ಕೆಲ ನಾಯಕರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್‌ ಕೊಟ್ಟರು. ರಾಹುಲ್‌ ಅವರ ಅನೇಕ ನಡೆ-ನುಡಿಗಳನ್ನು ಪ್ರಸ್ತಾಪಿಸುವ ಮೂಲಕ ಪ್ರತ್ಯುತ್ತರದ ಪಂಚ್‌ ನೀಡಿದರು.

2016ರ ಡಿಸೆಂಬರ್‌ 9ರಂದು ಲೋಕಸಭೆಯಲ್ಲಿ ರಾಹುಲ್‌, ”ನೋಟು ಅಮಾನ್ಯೀಕರಣದ ಕುರಿತು ನನಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಇಲ್ಲಿ ನಾನು ಮಾತನಾಡಿದರೆ ಭೂಕಂಪವಾಗುತ್ತದೆ ಎಂಬ ಭಯ ಸರಕಾರಕ್ಕಿದೆ,” ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೇ ಇತ್ತೀಚಿನ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಇದ್ದಕ್ಕಿದ್ದಂತೆ ಪ್ರಧಾನಿಯವರನ್ನು ಅಪ್ಪಿಕೊಂಡು ನಂತರ, ತಮ್ಮ ಪಕ್ಷದ ಸದಸ್ಯರತ್ತ ಕಣ್ಣು ಹೊಡೆದಿದ್ದರು. ಇದೆಲ್ಲವನ್ನೂ ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ”ನಾವು ಭೂಕಂಪವಾಗಲಿದೆ ಎಂದು ಭಾವಿಸಿದ್ದೆವು. ಅದೇನೂ ಆಗಲಿಲ್ಲ. ಹಾಗೆಯೇ ಅಪ್ಪುಗೆಯಲ್ಲಿ ಮನಪೂರ್ವಕ ಹಾಗೂ ನಾಟಕೀಯತೆ ಯಾವುದು ಎಂಬುದನ್ನೂ ನಾನು ಅರಿತೆ,” ಎಂದು ಹೇಳುವ ಮೂಲಕ ರಾಹುಲ್‌ಗೆ ಎದಿರೇಟು ನೀಡಿದರು. ಈ ವೇಳೆ ರಾಹುಲ್‌ ಸದನದಲ್ಲಿ ಇರಲಿಲ್ಲ.

ಪ್ರಜಾತಂತ್ರದ ಶಕ್ತಿ ದೊಡ್ಡದು
ರಫೇಲ್‌ ಒಪ್ಪಂದವನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಸುಗಮ ಕಲಾಪಕ್ಕೆ ಅಡ್ಡಿಪಡಿಸಿದ್ದನ್ನು ಪ್ರಸ್ತಾಪಿಸಿದ ಅವರು, ”ಪ್ರತಿಪಕ್ಷಗಳ ಸದಸ್ಯರು ಸರಕಾರದ ಬಹುತೇಕ ನಿರ್ಧಾರಗಳನ್ನು ವಿರೋಧಿಸಿಕೊಂಡೇ ಸದನದ ಅಮೂಲ್ಯ ಸಮಯವನ್ನು ಹಾಳುಗೆಡವಿದರು. ಕಾಗದದ ವಿಮಾನಗಳನ್ನು ತೂರಿ, ದಾಖಲೆಗಳನ್ನು ಹರಿದು ಸ್ಪೀಕರ್‌ ಮುಂಭಾಗ ಎಸೆದು ಕಲಾಪವನ್ನು ಅವಮಾನಿಸಿದರು. ಆದರೆ ಪ್ರಜಾಪ್ರಭುತ್ವದ ಶಕ್ತಿ ದೊಡ್ಡದು. ಇದೆಲ್ಲವನ್ನೂ ಅರಗಿಸಿಕೊಂಡು ಸರಕಾರ ಸಾಧನೆಯತ್ತ ಹೆಜ್ಜೆ ಇರಿಸಿತು,” ಎಂದರು.

ಸಾಧನೆಯೇ ಮಂತ್ರ:
ಮೂರು ದಶಕದ ಬಳಿಕ ಕೇಂದ್ರದಲ್ಲಿ ‘ಕಾಂಗ್ರೆಸ್ಸೇತರ ಗೋತ್ರ’ದ ಪೂರ್ಣ ಬಹುಮತದ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ 125 ಕೋಟಿ ದೇಶವಾಸಿಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದೆ. ನಮ್ಮ ಸಾಧನೆಗೆ ಅವರೇ ಸ್ಫೂರ್ತಿದಾತರು. ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ದೇಶದ ಚಹರೆ ಬದಲಿಸಿದೆ. ಸಶಸ್ತ್ರ ಪಡೆಗಳನ್ನು ಬಲಗೊಳಿಸಿದೆ. ವಿದೇಶಗಳೊಂದಿಗೆ ರಾಜತಾಂತ್ರಿಕ ಹಾಗೂ ವಾಣಿಜ್ಯ ಬಂಧವನ್ನು ಗಟ್ಟಿಗೊಳಿಸಿದೆ ಎಂದು ಮೋದಿ ಹೇಳಿದರು.

ಮುಲಾಯಂಗೆ ವಂದನೆ 
ಮುಂದಿನ ಬಾರಿಯೂ ನೀವೇ ಪ್ರಧಾನಿಯಾಗಬೇಕು ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಕಲಾಪದಲ್ಲಿ ಹೇಳಿದಾಗ, ಪ್ರಧಾನಿ ಮೋದಿ ಕೈಮುಗಿದು ವಂದಿಸಿದರು. ನಂತರ ತಮ್ಮ ಭಾಷಣದಲ್ಲೂ ಅವರು ಮುಲಾಯಂಗೆ ವಂದನಾಪೂರ್ವಕ ಗೌರವ ಸಲ್ಲಿಸಿದರು.

ಖರ್ಗೆ ಬಗ್ಗೆ ಏನೆಂದರು
”ಮಲ್ಲಿಕಾರ್ಜುನ ಖರ್ಗೆ ಒಬ್ಬ ಉತ್ತಮ ಸಂಸದೀಯ ಪಟು. ಅವರಿಗೆ ಗಂಟಲು ನೋವು. ಹಾಗಾಗಿ ಹೆಚ್ಚು ಮಾತನಾಡಲು ಆಗದು. ಇಂದು ಮಾತನಾಡಿದ್ದರೆ ಚೆನ್ನಾಗಿತ್ತು. ಅದೆಷ್ಟೋ ಬಾರಿ ಅವರು ಸದನದಲ್ಲಿ ಮಾತನಾಡಿದ್ದು ನನಗೆ ಸರಿಯಾಗಿಯೇ ಕೇಳಿಸುತ್ತಿರಲಿಲ್ಲ. ನಂತರದಲ್ಲಿ ಖರ್ಗೆ ಏನು ಹೇಳಿದರೆಂಬುದನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ಏಕೆಂದರೆ ಅವರ ಮಾತುಗಳು ನನ್ನ ಭಾಷಣಕ್ಕೆ ಸ್ಫೂರ್ತಿ ನೀಡುತ್ತಿದ್ದವು,” ಎಂದು ಹೇಳುವ ಮೂಲಕ ಮೋದಿ ಲೇವಡಿ ಮಾಡಿದರು. ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ಅವರನ್ನು ಭಾಷಣದಲ್ಲಿ ನೆನೆಯಲು ಪ್ರಧಾನಿ ಮರೆಯಲಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ