ಬೆಂಗಳೂರು,ಫೆ.14- ಇಟಲಿ ನಿರ್ಮಿತ ಯಾಂತ್ರಿಕೃತ ಕಸ ಗುಡಿಸುವ ಸಾಧನದ ಖರೀದಿ ಕುರಿತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಯಾಂತ್ರಿಕೃತ ಕಸ ಗುಡಿಸುವ ಸಾಧನದ ಪ್ರಾತ್ಯಕ್ಷಿಕೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಕಸ ಸಮಸ್ಯೆ ಅಧಿಕವಾಗಿದ್ದು 17 ಯಾಂತ್ರೀಕೃತ ಕಸ ಗುಡಿಸುವ ಸಾಧನವನ್ನು ಖರೀದಿಸಲು ಚಿಂತಿಸಲಾಗಿದೆ.ಕಸ ಗುತ್ತಿಗೆದಾರ ಬಾಲಸುಬ್ರಹ್ಮಣ್ಯಂ ಅವರು ಈ ಮಿನಿ ಯಾಂತ್ರೀಕೃತ ಕಸ ಗುಡಿಸುವ ಸಾಧನವನ್ನು ಪರಿಚಯಿಸಿದ್ದಾರೆ. ಇದರ ಸಾಮಥ್ರ್ಯವನ್ನು ಒಂದೇ ದಿನದಲ್ಲಿ ಅಳೆಯಲು ಸಾಧ್ಯವಿಲ್ಲ. ಹಾಗಾಗಿ ಒಂದು ವಾರಗಳ ಕಾಲ ಪ್ರಾಯೋಗಿಕವಾಗಿ ನಗರದ ಕೆಲವೆಡೆ ಉಪಯೋಗಿಸಲು ಸೂಚಿಸಲಾಗಿದೆ.
ಒಂದು ವೇಳೆ ಈ ಯಂತ್ರದ ಕಾರ್ಯ ತೃಪ್ತಿ ತಂದರೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಅವರೂ ಯಂತ್ರ ಪ್ರಾತ್ಯಕ್ಷಿಕೆ ವೀಕ್ಷಿಸಿದರು.ಕಸದ ಗುತ್ತಿಗೆದಾರ ಬಾಲಸುಬ್ರಹ್ಮಣ್ಯಂ ಮಾತನಾಡಿ, ಇಟಲಿ ಮೂಲದ ಈ ಯಂತ್ರ ನಮ್ಮಲ್ಲಿನ ಯಂತ್ರಗಳಿಗಿಂತಲೂ ಅತ್ಯಾಧುನಿಕವಾಗಿದೆ. ಸಣ್ಣ ಸಣ್ಣ ಜಾಗಗಳಲ್ಲೂ ಕಸ ಗುಡಿಸಬಹುದಾಗಿದೆ.ಈ ಯಂತ್ರದ ಮುಖೇನ ಮಳೆಗಾಲದಲ್ಲೂ ಕಸ ಗುಡಿಸಲು ಅನುಕೂಲವಾಗುತ್ತದೆ ಎಂದು ಯಂತ್ರದ ಕುರಿತು ವಿವರಿಸಿದರು.