ಲೆಪ್ಟಿನೆಂಟ್ ಗವರ್ನರ್ ಕಿರಣ್‍ಬೇಡಿ ಸಂವಿಧಾನ ವಿರೋಧಿ ಧೋರಣೆ: ರಾಜಭವನದ ಮುಂದೆ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರಿಂದ ಆಹೋರಾತ್ರಿ ಧರಣಿ

ಪುದುಚೇರಿ, ಫೆ.14- ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಸಂವಿಧಾನ ವಿರೋಧಿ ಧೋರಣೆ ಮತ್ತು ಸರಕಾರದ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ರಾಜಭವನದ ಮುಂದೆ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಹಿಂದೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ, ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ರೀತಿ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಹೋರಾಟ ನಡೆಸಿದ್ದರು. ಇದೀಗ ಪುದುಚೇರಿ ಮುಖ್ಯ ಮಂತ್ರಿ ವಿ. ನಾರಾಯಣಸ್ವಾಮಿ ಅವರ ಹಾದಿಯನ್ನೇ ಅನುಸರಿಸಿದ್ದು, ಇದಕ್ಕೆ ಸಚಿವರು ಮತ್ತು ಶಾಸಕರು ಸಾಥ್ ನೀಡಿದ್ದಾರೆ.

ಮುಖ್ಯ ಮಂತ್ರಿ ವಿ. ನಾರಾಯಣ ಸ್ವಾಮಿ , ಸಚಿವರು , ಶಾಸಕರು ಇಂದು ಕೂಡಾ ತಮ್ಮ ಹೋರಾಟ ಮುಂದುವರೆಸಿದ್ದು, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಸಂವಿಧಾನ ನೀತಿಯನ್ನು ಅನುಸರಿಸುತ್ತಿದ್ದಾರೆ. ಪುದುಚೇರಿ ಸರಕಾರದ ಆಡಳಿತ ವ್ಯವಹಾರದ 1963ರ ನಿಯಮಾವಳಿಗಳನ್ನು ಲೆಫ್ಟಿನೆಂಟ್ ಗವರ್ನರ್ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದಾರೆ.

ಬಡವರಿಗೆ ಉಚಿತ ಅಕ್ಕಿ ಪೂರೈಕೆಗೆ ಸಂಬಂಧಿಸಿದ ಸರಕಾರದ ಪ್ರಸ್ತಾವನೆಯ ಕಡತವನ್ನು ಗವರ್ನರ್ ಕಿರಣ್ ಬೇಡಿ ಹಿಂದಕ್ಕೆ ಕಳುಹಿಸಿದ್ದಾರೆ. ಚುನಾಯಿತ ಸರಕಾರದ ಜನಪರ ಯೋಜನೆಯನ್ನು ತಡೆಯಲು ಅವರಿಗೆ ಅಧಿಕಾರ ನೀಡಿದವರು ಯಾರು ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಫೆ.21ರಂದು ಬೆಳಗ್ಗೆ 10 ಗಂಟೆಗೆ ತಮ್ಮನ್ನು ಭೇಟಿಯಾಗುವಂತೆ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರಿಗೆ ಪತ್ರ ಬರೆದಿದ್ದು, ಈ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ