ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು,ಫೆ.13- ಜೈಲು ಶಿಕ್ಷೆ ಅನುಭವಿಸಿ ಹೊರಬಂದ ನಂತರವೂ ಮೋಜಿನ ಜೀವನಕ್ಕಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಸುದ್ದಗುಂಟೆಪಾಳ್ಯ ಠಾನೆ ಪೊಲೀಸರು ಬಂಧಿಸಿ 6.50 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಗುರಪ್ಪನಪಾಳ್ಯದ ಜುನೇದ್ ಅಹಮ್ಮದ್(24) ಮತ್ತು ಕೇರಳ ಮೂಲದ ನೀಲಕಂಠನ್(19) ಬಂಧಿತ ಆರೋಪಿಗಳು.

ಆರೋಪಿ ಜುನೇದ್ ಅಹಮದ್ ಈ ಹಿಂದೆ ಮೈಕೊ ಲೇಔಟ್ ಠಾಣೆಯ ಪ್ರಕರಣವೊಂದರಲ್ಲಿ ಬಂಧನಕ್ಕೊಳಪಟ್ಟು ಕಳೆದ ಡಿಸೆಂಬರ್‍ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿ ಹೊರಬಂದು ಮೋಜಿನ ಜೀವನಕ್ಕಾಗಿ ಮಾದಕ ವಸ್ತು ಎಲ್‍ಎಸ್‍ಡಿ ಮತ್ತು ಗಾಂಜಾವನ್ನುಆಂಧ್ರಪ್ರದೇಶದ ಕರ್ನೂಲ್‍ನಿಂದ ಸರಬರಾಜು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪಿಜಿ ಹಾಸ್ಟೆಲ್‍ಗಳ ನಿವಾಸಿಗಳಿಗೆ ಮಾರಾಟ ಮಾಡುತ್ತಿದ್ದನು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಎಸ್‍ಜಿಪಾಳ್ಯ ಮುಖ್ಯರಸ್ತೆಯ ಶ್ರೀನಿವಾಸ ಚಿತ್ರಮಂದಿರ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 6.50 ಲಕ್ಷ ರೂ.ಬೆಲೆಯ ಎಲ್‍ಎಸ್‍ಡಿ 18 ಸ್ಟಿಪ್‍ಗಳು ಮತ್ತು 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಮಾರ್ಗದರ್ಶನದಲ್ಲಿ ಸುದ್ದಗುಂಟೆಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ