ನವದೆಹಲಿ, ಫೆ.13- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸುಳ್ಳು, ಬಡಾಯಿ ಮತ್ತು ಬೆದರಿಕೆ ಕೇಂದ್ರ ಸರ್ಕಾರದ ತತ್ತ್ವ-ಸಿದ್ಧಾಂತಗಳಾಗಿವೆ ಎಂದು ಕಟುವಾಗಿ ಟೀಕಿಸಿದ್ದಾರೆ. ಇಂಥ ರಾಜಕೀಯ ಪ್ರತಿಕೂಲದ ಸನ್ನಿವೇಶವನ್ನು ತಮ್ಮ ಪಕ್ಷ ಎಲ್ಲ ಸಾಮಥ್ರ್ಯದಿಂದಲೂ ಎದುರಿಸಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್, ಸಂಘಟನೆಗೆ ಹೊಸ ಶಕ್ತಿ ತುಂಬುತ್ತಿರುವುದಕ್ಕಾಗಿ ತಮ್ಮ ಪುತ್ರ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ರಾಹುಲ್ ಕಾಂಗ್ರೆಸ್ನ ಹಿರಿಯ ಅನುಭವಿ ನಾಯಕರಿಗೆ ಮತ್ತು ಯುವಶಕ್ತಿಗೆ ಚೈತನ್ಯ ತುಂಬಿದ್ದಾರೆ ಎಂದು ಸೋನಿಯಾ ಬಣ್ಣಿಸಿದರು.
ನಾವು ಮುಂಬರುವ ಲೋಕಸಭಾ ಚುನಾವಣೆಯನ್ನು ನವ ವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಎದುರಿಸುತ್ತಿದ್ದೇವೆ. ರಾಜಸ್ತಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ನಮ್ಮ ಪಕ್ಷದ ಗೆಲುವು ಹೊಸ ಭರವಸೆ ಮೂಡಿಸಿದೆ ಎಂದು ಅವರು ಹೇಳಿದರು.
ಈ ಸಭೆಯಲ್ಲಿ ರಾಹುಲ್ಗಾಂಧಿ, ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕ ಹಿರಿಯ ಧುರೀಣರು ಹಾಜರಿದ್ದರು.