ಬೆಂಗಳೂರು, ಫೆ.13- ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರರಿಗೆ ಮೂಲವೇತನ ಹಾಗೂ ಎಲ್ಲ ರೀತಿಯ ಸೌಲಭ್ಯ ನೀಡಲು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಹಣಕಾಸು, ಕಾನೂನು, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಯುವಜನ ಕ್ರೀಡಾ ಸಚಿವ ರಹೀಮ್ಖಾನ್ ವಿಧಾನ ಪರಿಷತ್ನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಹಿಂದಿನ ಕಲಾಪದಲ್ಲೇ ಹಾಲಿ ಇರುವ ನಿಯಮಾವಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಯಾವ ಕಾರಣಕ್ಕಾಗಿ ಈವರೆಗೆ ತಿದ್ದುಪಡಿ ಮಾಡಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಕ್ರೀಡಾ ಪ್ರಾಧಿಕಾರದಲ್ಲಿ 1996ರಿಂದ 2003ರ ವರೆಗೆ ಕಾರ್ಯನಿರ್ವಹಿಸಿದ ತರಬೇತುದಾರರಿಗೆ ಮೂಲವೇತನ ಮತ್ತು ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ರಹೀಂಖಾನ್ ತಿಳಿಸಿದರು.
ಇದಕ್ಕೂ ಮುನ್ನ ಸದಸ್ಯೆ ತೇಜಸ್ವಿನಿ, ಪ್ರಕಾಶ್ ರಾಥೋಡ್, ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ಸದಸ್ಯರು ಕ್ರೀಡಾ ಪ್ರಾಧಿಕಾರದ ತರಬೇತುದಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಇರುವ ತೊಂದರೆಗಳಾದರೂ ಏನು ಎಂದು ಪ್ರಶ್ನಿಸಿದರು.
ಕ್ರೀಡಾ ತರಬೇತುದಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.