ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನಲೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೆಲಕಾಲ ಕಲಾಪ ಮುಂದೂಡಿಕೆ

ನವದೆಹಲಿ, ಫೆ.13- ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಧರಣಿ, ಪ್ರತಿಭಟನೆ ಇಂದೂ ಸಹ ಮುಂದುವರಿಯಿತು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಕೆಲಕಾಲ ಮುಂದೂಡಲಾಯಿತು.

ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ, ಪೊಲೀಸ್ ಲಾಠಿಚಾರ್ಜ್‍ನಿಂದ ತಲೆಗೆ ಬ್ಯಾಂಡೇಜ್ ಧರಿಸಿದ್ದ ಸಮಾಜವಾದಿ ಪಕ್ಷದ ಸದಸ್ಯ ಧರ್ಮೇಂದ್ರ ಯಾದವ್ ವಿಷಯ ಪ್ರಸ್ತಾಪಿಸಿ ತಮ್ಮ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರನ್ನು ಲಖನೌ ವಿಮಾನ ನಿಲ್ದಾಣದಲ್ಲಿ ವಿನಾಕಾರಣ ತಡೆಹಿಡಿದಿದ್ದಾರೆ. ಇದನ್ನು ಪ್ರತಿಭಟಿಸಿದ್ದಕ್ಕೆ ತಮ್ಮ ಮೇಲೆ ಮತ್ತು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಉತ್ತರ ಪ್ರದೇಶದ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ತೃಣಮೂಲ ಕಾಂಗ್ರೆಸ್ ಸದಸ್ಯರು ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ವಿಷಯ ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸಿದರು.

ಎಸ್‍ಪಿ ಮತ್ತು ಟಿಎಂಸಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ದಾವಿಸಿ ಧರಣಿ ನಡೆಸಿದ್ದರಿಂದ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಎಸ್‍ಪಿ ಪ್ರತಿಭಟನೆ: ಅತ್ತ ರಾಜ್ಯಸಭೆಯಲ್ಲೂ ಸಮಾಜವಾದಿ ಪಕ್ಷದ ಸದಸ್ಯರು ಇದೇ ವಿಷಯ ಪ್ರಸ್ತಾಪಿಸಿದರು. ಪಕ್ಷದ ಸಂಸದರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯವೆಸಗಿದ್ದಾರೆ ಎಂದು ಪ್ರತಿಭಟನೆ ನಡೆಸಿದರು.

ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಸಭಾಪತಿ ಡಾ.ಎಂ.ವೆಂಕಯ್ಯನಾಯ್ಡು ಮನವಿ ಮಾಡಿದರೂ ಧರಣಿ ಮುಂದುವರಿಸಿದ್ದರಿಂದ ಅಸಮಾಧಾನಗೊಂಡ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಮೇಲ್ಮನೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ