ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ: ಜೆಡಿಎಸ್ ಶಾಸಕ ನಾರಾಯಣಗೌಡ

ಬೆಂಗಳೂರು,ಫೆ.13- ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಬಿಜೆಪಿಯವರು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದರೂ ನಾನು ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈನಿಂದ ಆಗಮಿಸಿದ ನಾರಾಯಣಗೌಡ ಅವರನ್ನು ಭೇಟಿ ಮಾಡಲು ಬಂದಿದ್ದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನಾರೋಗ್ಯದಿಂದಾಗಿ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದರು.

ನನ್ನನ್ನು ಕೊಂಡುಕೊಳ್ಳುವ ತಾಕತ್ತು ಬಿಜೆಪಿಗಿಲ್ಲ. ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಕರೆ ತರುವ ಸಾಮಥ್ರ್ಯ ನನಗಿದೆ.ಮುಂಬೈನಲ್ಲಿ ನನ್ನ ಎಲ್ಲ ವ್ಯವಹಾರ ಇರುವುದರಿಂದ ಮುಂಬೈಗೂ ನನಗೂ ನಂಟಿದೆ.ಮುಂಬೈನಲ್ಲಿದ್ದರೂ ಮುಖ್ಯಮಂತ್ರಿಯವರ ಸಂಪರ್ಕದಲ್ಲಿದ್ದೆ ಎಂದು ಅವರು ಹೇಳಿದರು.

ಸಿಎಂ-ನಾರಾಯಣಗೌಡ ಭೇಟಿ:
ಜೆಡಿಎಸ್ ಶಾಸಕ ನಾರಾಯಣಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ತಡರಾತ್ರಿ ನಗರಕ್ಕೆ ಆಗಮಿಸಿದ ನಾರಾಯಣಗೌಡರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಳೆದ ನಾಲ್ಕು ದಿನಗಳಿಂದ ವಿಧಾನಸಭೆ ಅಧಿವೇಶನಕ್ಕೆ ಅವರು ಗೈರು ಹಾಜರಾಗಿದ್ದರು. ಅನಾರೋಗ್ಯದಿಂದಾಗಿ ನಾರಾಯಣಗೌಡರು ಅಧಿವೇಶನಕ್ಕೆ ಬರಲಾಗುತ್ತಿಲ್ಲ ಎಂಬ ಮಾಹಿತಿಯನ್ನು ಜೆಡಿಎಸ್ ನಾಯಕರು ನೀಡಿದ್ದರು.

ನಾರಾಯಣಗೌಡರು ಬಿಜೆಪಿಯ ಸಂಪರ್ಕದಲ್ಲಿದ್ದು ಮುಂಬೈನಲ್ಲಿದ್ದಾರೆ ಎಂಬ ವದಂತಿಯೂ ಈ ಹಿಂದೆ ಹರಡಿತ್ತು.

ಈ ನಡುವೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ರಾತ್ರಿಯಿಂದಲೂ ನಾರಾಯಣಗೌಡರು ಸಂಪರ್ಕದಲ್ಲಿದ್ದಾರೆ.ಅವರ ಕೈಗೆ ಹಾಕಿರುವ ಬ್ಯಾಂಡೇಜ್ ಇನ್ನು ಹಾಗೆಯೇ ಇದೆ.ಅವರು ತಡರಾತ್ರಿ ಬೆಂಗಳೂರಿಗೆ ಬಂದಿದ್ದಾರೆ.ಅವರೊಂದಿಗೆ ಯಾವುದೇ ರೀತಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ನಾರಾಯಣಗೌಡರು ಪಾಲ್ಗೊಳ್ಳುತ್ತಾರೆ.ಆ ಬಗ್ಗೆ ಅವರನ್ನೇ ಕೇಳಿ ಎಂದು ಸಚಿವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ