ಬೆಂಗಳೂರು, ಫೆ.13-ಪಕ್ಷದಲ್ಲಿ ಅಸಮಾಧಾನ ವಿರುವುದು ನಿಜ.ಅತೃಪ್ತರೆಲ್ಲ ಒಗ್ಗಟ್ಟಾಗಿದ್ದೇವೆ, ಒಂದೇ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ಸೇರಿದಂತೆ ಅನೇಕ ಮಂದಿ ಅಸಮಾಧಾನಿತರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ ನಾವ್ಯಾರು ಪಕ್ಷ ಬಿಡುತ್ತೇವೆ ಎಂದು ಹೇಳಿಲ್ಲ. ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಹೇಳಿದರು.
ನನಗೆ ಮುಂಬೈನಲ್ಲಿ ಹಲವಾರು ಮಂದಿ ಆತ್ಮೀಯರಿದ್ದಾರೆ. ಹಲವಾರು ಬಾರಿ ಅಲ್ಲಿಗೆ ಹೋಗಿದ್ದೇನೆ. ಈ ಬಾರಿ ನಾವು ಅಲ್ಲಿ ಹೋಗುವುದಕ್ಕೂ, ಇಲ್ಲಿ ಅತೃಪ್ತಿ ಬಗ್ಗೆ ಚರ್ಚೆಯಾಗುವುದಕ್ಕೆ ಕಾಕತಾಳೀಯವಾಗಿದೆ. ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಒಂದೇ ಆಗಿದೆ ಅಷ್ಟೆ ಎಂದರು.
ಅಸಮಾಧಾನಿತರು 15-20 ಮಂದಿ ಇದ್ದಾರೆ. ನಾವು ಸಿಎಲ್ಪಿ ನಾಯಕ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಹಲವಾರು ಬಾರಿ ವಿಪ್ ನೀಡಿದ್ದಾರೆ, ಅದನ್ನು ಪಾಲಿಸಿದ್ದೇವೆ. ವೈಯಕ್ತಿಕ ಕೆಲಸದಿಂದ ಶಾಸಕಾಂಗ ಸಭೆಗೆ ಬರಲಾಗಿರಲಿಲ್ಲ. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.