ಶಿಲ್ಲಾಂಗ್,ಫೆ.13-ಶಾರದಾ ಚಿಟ್‍ಫಂಡ್ ಮತ್ತು ರೋಸ್ ವಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) 5ನೇ ದಿನವಾದ ಇಂದು ಕೂಡ ತೀವ್ರ ವಿಚಾರಣೆಗೆ ಒಳಪಡಿಸಿತು.
ಮೇಘಾಲಯ ರಾಜಧಾನಿ ಶಿಲ್ಲಾಂಗ್‍ನಲ್ಲಿ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ್ ಅವರನ್ನು ಕಳೆದ ನಾಲ್ಕು ದಿನಗಳಿಂದ ಸತತ 7 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು.
ಇಂದು ಕೂಡ ಅವರ ವಿಚಾರಣೆಗೊಳಪಡಿಸಿ ಮತ್ತಷ್ಟು ಮಾಹಿತಿಗಳನ್ನು ಸಿಬಿಐ ಸಂಗ್ರಹಿಸುತ್ತಿದೆ.
ಈ ಎರಡೂ ಪ್ರಕರಣಗಳ ವಿಚಾರಣೆಗೆ ತೆರಳಿದ್ದ ವೇಳೆ ಸಿಬಿಐ ಹಾಗೂ ಕೋಲ್ಕತ್ತಾ ಪೊಲೀಸರ ನಡುವೆ ನಡೆದ ಹಾದಿಬೀದಿ ಜಗಳ ಭಾರಿ ಸದ್ದು ಮಾಡಿತ್ತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲು ಸಹ ಏರಿತ್ತು.
ಕಳೆದ ಶುಕ್ರವಾರ ಸಿಬಿಐನ ಮಾಜಿ ಹಂಗಾಮಿ ಮುಖ್ಯಸ್ಥ ನಾಗೇಶ್ವರ್ ರಾವ್ ಪತ್ನಿ ಒಡೆತನದ ಏಂಜೆಲಾ ಮರ್ಕೆಂಟೈಲ್ಸ್‍ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಕೋಲ್ಕತ್ತಾ ಪೊಲೀಸರು ದಾಳಿ ನಡೆಸಿ ಸೇಡಿನ ಕ್ರಮಕೈಗೊಂಡಿದ್ದರು.
ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಕೋಲ್ಕತ್ತಾದ ಬೌಬಜಾರ್ ಪೊಲೀಸ್ ಸ್ಟೇಷನ್‍ನಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು, ಏಂಜೆಲಾ ಮರ್ಕೆಂಟೈಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.