ಬೆಂಗಳೂರು,ಫೆ.13- ತಿರುಪತಿ, ಶ್ರೀಶೈಲ,ಮಂತ್ರಾಲಯ, ಪಂಡರಾಪುರ ಹಾಗೂ ತುಳಜಾ ಭವಾನಿಯಲ್ಲಿರುವ ಕರ್ನಾಟಕ ಭವನಗಳಿಗೆ ಸೂಕ್ತ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಧಾನಪರಿಷತ್ ಸದಸ್ಯರ ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.
ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಭವನಗಳಲ್ಲಿ ರಾಜ್ಯದಿಂದ ತೆರಳುವ ಭಕ್ತರು ಹಾಗೂ ಸಾರ್ವಜನಿಕರಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಲೇ ಇವೆ. ಹೀಗಾಗಿ ಮೇಲ್ಮನೆ ಸದಸ್ಯರ ನಿಯೋಗವನ್ನು ಕರ್ನಾಟಕ ಭವನಗಳಿಗೆ ಕರೆದೊಯ್ದು ಸವಲತ್ತುಗಳನ್ನು ಕಲ್ಪಿಸುವ ಬಗ್ಗೆ ಸಲಹೆ ಪಡೆಯಲಿದ್ದೇನೆ ಎಂದು ಹೇಳಿದರು.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‍ನ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೊರ ರಾಜ್ಯಗಳಲ್ಲಿ ಕರ್ನಾಟಕ ಭವನಗಳಿದ್ದರೂ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಪ್ರತಿಯೊಬ್ಬರೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಲ್ಲಿ ನಾವು ಹಾಲಿ ಇರುವ ಕಟ್ಟಡಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲು ನ್ಯಾಯಾಲಯದ ತಡೆಯಾಜ್ಞೆ ಇದೆ.ಈ ತಡೆಯಾಜ್ಞೆ ತೆರವುಗೊಳಿಸಲು ನಮ್ಮ ವಕೀಲರ ಮೂಲಕ ಮನವಿ ಮಾಡಲಾಗಿದೆ.ಆದಷ್ಟು ಶೀಘ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಿರುಪತಿಯಲ್ಲಿರುವ ಕರ್ನಾಟಕ ಭವನದ ಕೊಠಡಿಗಳನ್ನು ಓನ್ ಯುವರ್ಸ್ ರೂಮ್ಸ್ ಡೊನೇಷನ್ ಸ್ಕೀಂ ಅಡಿ ನಿರ್ಮಾಣ ಮಾಡಲಾಗಿತ್ತು. ವರ್ಷದಲ್ಲಿ 20 ದಿವಸಗಳು ಕೊಠಡಿಗಳನ್ನು ಯಾರೇ ಕೇಳಿದರೂ ಶೇ.25ರಷ್ಟು ಶುಲ್ಕ ಪಾವತಿ ನೀಡಬೇಕು.ತಿರುಪತಿಗೆ ಕರ್ನಾಟಕದಿಂದ ಬರುವ ಭಕ್ತರ ಸಂಖ್ಯೆ ಹೆಚಚಾಗುತ್ತಿದೆ. ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ ಎಂದು ತಿಳಿಸಿದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ರಮೇಶ್, ಮುಸ್ಲಿಮರಿಗೆ ಮೆಕ್ಕಾ, ಕ್ರಿಶ್ಚಿಯನ್ನರಿಗೆವ್ಯಾಟಿಕನ್, ನಮಗೆ ತಿರುಪತಿ ಮುಖ್ಯ. ಇಲ್ಲಿಂದ ಹೋಗುವ ಭಕ್ತರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿದ್ದೇನೆ. ತಿರುಪತಿಯಲ್ಲಿ 91 ಕೊಠಡಿಗಳಿವೆ. ಅವುಗಳಲ್ಲಿ 41 ಕೊಠಡಿಗಳನ್ನು ನವೀಕರಣ ಮಾಡಲಾಗಿದೆ.40 ಕೊಠಡಿಗಳ ದುರಸ್ಥಿ ಕಾರ್ಯ ನಡೆದಿದೆ.ಇದಕ್ಕಾಗಿ ಮುಖ್ಯಮಂತ್ರಿ 4 ಕೋಟಿ ಹಣ ನೀಡಿದ್ದಾರೆ.ಕರ್ನಾಟಕ ಭವನಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಯವುದೇ ಸಮಸ್ಯೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.